ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಇಲ್ಲಿಯ ಲಿಂಗಾಯತ ಮಹಾಮಠಕ್ಕೆ ಶೈತ್ಯ ಶವ ಪೆಟ್ಟಿಗೆ ಕೊಡುಗೆಯಾಗಿ ನೀಡಿದೆ.
ಕ್ಲಬ್ ಪದಾಧಿಕಾರಿಗಳು ನಗರದ ಲಿಂಗಾಯತ ಮಹಾಮಠದಲ್ಲಿ ಪ್ರಭುದೇವ ಸ್ವಾಮೀಜಿ ಅವರಿಗೆ ಪೆಟ್ಟಿಗೆ ಹಸ್ತಾಂತರಿಸಿದರು.
ಪರ ಹಿತದ ಕಾರ್ಯಗಳಿಂದ ದೇವರ ಒಲುಮೆ ಸಾಧ್ಯವಿದೆ ಎಂದು ಪ್ರಭುದೇವ ಸ್ವಾಮೀಜಿ ನುಡಿದರು.
ಬರೀ ಲಿಂಗಪೂಜೆ ಮಾಡಿದರೆ ಸಾಲದು. ಜಂಗಮ ಸೇವೆಯೂ ಅವಶ್ಯಕವೆಂದು ಬಸವಣ್ಣನವರು ಹೇಳಿದ್ದರು. ಸಮಾಜ ಸೇವೆಯಿಂದಲೇ ಲಿಂಗ ಪೂಜೆ ಪರಿಪೂರ್ಣವಾಗುತ್ತದೆ. ಪರಮಾತ್ಮ ಜಂಗಮ ರೂಪದಲ್ಲಿ ಸುಳಿದು ಈ ಸೇವೆಯನ್ನು ಸ್ವೀಕರಿಸುತ್ತಾನೆ ಎಂದು ಹೇಳಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಸಹಯೋಗದಲ್ಲಿ ಮಹಾಮಠದಿಂದ ಈಗಾಗಲೇ ಅನ್ನಪೂರ್ಣ ಯೋಜನೆ ಜಾರಿಯಲ್ಲಿದೆ. ಇದೀಗ ಕ್ಲಬ್‍ನ ಶೈತ್ಯ ಶವ ಪೆಟ್ಟಿಗೆ ಕೊಡುಗೆಯಿಂದ ಮತ್ತೊಂದು ಮಾನವೀಯ ಕಾರ್ಯದೆಡೆಗೆ ಹೆಜ್ಜೆ ಇರಿಸಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಕಾರ್ಯ ಶ್ಲಾಘನೀಯವಾದದ್ದು. ಶವ ಪೆಟ್ಟಿಗೆ ಸೇವೆ ಸಾರ್ಥಕವಾಗುವಂತೆ ಕಾರ್ಯವೆಸಗಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಶಿವಕುಮಾರ ಪಾಖಾಲ್ ಮಾತನಾಡಿ, ಕ್ಲಬ್‍ನಿಂದ ಈಗಾಗಲೇ ಡಾ. ಕೃಷ್ಣಮೂರ್ತಿ ಆಸ್ಪತ್ರೆಗೆ ಒಂದು ಶೈತ್ಯ ಶವ ಪೆಟ್ಟಿಗೆ ಕೊಡಲಾಗಿದೆ. ಶಿವನಗರ, ಪ್ರತಾಪನಗರ, ನೌಬಾದ್ ಭಾಗದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣ ಲಿಂಗಾಯತ ಮಹಾಮಠಕ್ಕೆ ಇನ್ನೊಂದು ಶವ ಪೆಟ್ಟಿಗೆ ಕೊಡುಗೆಯಾಗಿ ನೀಡಲಾಗಿದೆ ಎಂದು ತಿಳಿಸಿದರು.
ಲಂಗಾಯತ ಮಹಾ ಮಠದವರು ಶವ ಪೆಟ್ಟಿಯನ್ನು ಸುರಕ್ಷಿತವಾಗಿ ಇಟ್ಟು, ಅವಶ್ಯಕತೆ ಇರುವವರಿಗೆ ಕೊಡಲಿದ್ದಾರೆ ಎಂದು ತಿಳಿಸಿದರು.
ಕ್ಲಬ್ ಸದಸ್ಯ ಡಾ. ರಘು ಕೃಷ್ಣಮೂರ್ತಿ ಮಾತನಾಡಿ, ಆಧುನಿಕ ಯುಗದಲ್ಲಿ ಕಾರ್ಯ ವ್ಯಾಪ್ತಿ ವಿಶ್ವದ ತುಂಬಾ ಹರಡಿದೆ. ನಮ್ಮ ಯುವಕರು ದೇಶ, ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಮನೆಗಳಲ್ಲಿ ಯಾರಾದರೂ ಮರಣ ಹೊಂದಿದರೆ, ದೂರ ದೂರದಿಂದ ಅವರ ಸಂಬಂಧಿಕರು ಬರುವವರೆಗೆ ಶವವನ್ನು ಗೌರವ ಪೂರ್ವಕವಾಗಿ ಕೆಡದಂತೆ ಕಾಪಾಡಲು ಶೈತ್ಯ ಶವ ಪೆಟ್ಟಿಗೆ ನೆರವಾಗಲಿದೆ ಎಂದು ಹೇಳಿದರು.
ಸಾಹಿತಿ ರಮೇಶ ಮಠಪತಿ ಮಾತನಾಡಿ, ಶವ ಪೆಟ್ಟಿಗೆ ಇಡಲು ಲಿಂಗಾಯತ ಮಹಾಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಶವ ಪೆಟ್ಟಿಗೆಯ ಅವಶ್ಯಕತೆ ಇರುವವರು ಮೊಬೈಲ್ ಸಂಖ್ಯೆ 9741690770 ಅಥವಾ 9449139001ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ಸದಸ್ಯರಾದ ಡಾ. ಶರಣ ಬುಳ್ಳಾ, ಸತೀಶ್ ಸ್ವಾಮಿ, ರೂಪಾಲಿ ನಿತಿನ್ ಕರ್ಪೂರ, ಪ್ರಮುಖರಾದ ಅಶೋಕ ಎಲಿ, ಮಾಣಿಕಪ್ಪ ಗೋರನಾಳೆ, ಆರ್.ಕೆ. ಪಾಟೀಲ, ರಾಜಕುಮಾರ ಪಾಟೀಲ, ಚನ್ನಬಸಪ್ಪ ಹಂಗರಗಿ, ಶ್ರೀಕಾಂತ ಬೀಕ್ಲೆ ಮತ್ತಿತರರು ಉಪಸ್ಥಿತರಿದ್ದರು.
ಪರುಷಕಟ್ಟೆ ಚನ್ನಬಸವಣ್ಣ ಪ್ರಾರ್ಥನೆಗೈದರು. ಕ್ಲಬ್ ಕಾರ್ಯದರ್ಶಿ ಪ್ರಭು ತಟಪಟ್ಟಿ ನಿರೂಪಿಸಿದರು.