ಜಿಲ್ಲೆ

30ಕ್ಕೆ ಸದ್ಭಾವನಾ ನಡಿಗೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸದ್ಭಾವನಾ ಮಂಚ್ ವತಿಯಿಂದ ನಗರದಲ್ಲಿ ಜೂನ್ 30 ರಂದು ಬೆಳಿಗ್ಗೆ ‘ಸದ್ಭಾವನಾ ನಡಿಗೆ’ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10.30ಕ್ಕೆ ಮಹಮೂದ್ ಗವಾನ್ ಮದರಸಾದಿಂದ ನಡಿಗೆ ಆರಂಭಗೊಂಡು, ಚೌಬಾರಾ, ನಯಾ ಕಮಾನ್, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮುಕ್ತಾಯಗೊಳ್ಳಲಿದೆ ಎಂದು ಸದ್ಭಾವನಾ ಮಂಚದ ಸಂಚಾಲಕ ಗುರುನಾಥ ಗಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಡಿಗೆ ಕೊನೆಗೊಂಡ ನಂತರ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗಾಗಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಭಾರತ ಶಾಂತಿಪ್ರಿಯ ದೇಶ. ಅನೇಕತೆಯಲ್ಲಿ ಏಕತೆ ಇದರ ವಿಶೇಷ. ವಿಶ್ವದಲ್ಲಿ ಕೋಮು ಸೌಹಾರ್ದಕ್ಕೆ ಪ್ರಸಿದ್ಧಿ ಪಡೆದಿದೆ. ಶಾಂತಿ, ಸಹಬಾಳ್ವೆ, ಸಹೋದರತ್ವ ಎಲ್ಲ ಧರ್ಮಗಳ ತಿರುಳಾಗಿದೆ. ಆದರೆ, ದೇಶ ಇತ್ತೀಚೆಗೆ ಕೋಮುವಾದ, ಕೊಲೆ, ಗುಂಪು ಕೊಲೆ, ದೊಂಬಿ, ದ್ವೇಷ, ಆರ್ಥಿಕ ಬಹಿಷ್ಕಾರದಂತಹ ಸಾಮಾಜಿಕ ಅನಿಷ್ಠಗಳಿಗೆ ಹೆಸರುವಾಸಿ ಆಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಅನಿಷ್ಠಗಳಿಂದ ಮಕ್ಕಳು, ಯುವಕರು ಹಾಗೂ ನಾಗರಿಕರನ್ನು ರಕ್ಷಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೌಹಾರ್ದ ನಡಿಗೆ ಸಂಘಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಾಂತಿ, ಸಹಬಾಳ್ವೆ ಬಯಸುವ ನಾಗರಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಡಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.