ಜಿಲ್ಲೆ

ಮಹಿಳಾ ಸಬಲೀಕರಣ ವಿವಿ ಧ್ಯೇಯ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮಹಿಳಾ ಸಬಲೀಕರಣ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಧ್ಯೇಯವಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಆರ್.ವಿ. ಗಂಗಶೆಟ್ಟಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ವಿಶ್ವವಿದ್ಯಾಲಯದ 22ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಿಂಗ ತಾರತಮ್ಯ ನಿವಾರಣೆ, ಸಮ ಸಮಾಜ ನಿರ್ಮಾಣ, ಮಹಿಳಾ ನಾಯಕತ್ವ ಮೊದಲಾದವು ವಿಶ್ವವಿದ್ಯಾಲಯದ ಆಶಯಗಳಲ್ಲಿ ಸೇರಿವೆ ಎಂದು ತಿಳಿಸಿದರು.

ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ಪ್ರಯೋಜನ ಪಡೆಯಬೇಕು. ಶೈಕ್ಷಣಿಕ ಸಾಧನೆ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಸದ್ಗುರು ಸಿದ್ಧಾರೂಢ ಪದವಿ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಸ್ತ್ರೀ-ಪುರುಷರಿಬ್ಬರ ಕೊಡುಗೆಯೂ ಅಗತ್ಯ. ಮಹಿಳೆಯರು ಎಲ್ಲ ಕ್ಷೇತ್ರಗಳಿಗೂ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಉಪನ್ಯಾಸಕ ಡಾ. ಸಂಗಪ್ಪ ತೌಡಿ ಮಾತನಾಡಿ, ಹೆಣ್ಣುಮಕ್ಕಳು ಅಕ್ಕ ಮಹಾದೇವಿ ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾದೇಶಿಕ ಕೇಂದ್ರದ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಪ್ರಿಯದರ್ಶಿನಿ, ಐಶ್ವರ್ಯ, ಪ್ರಿಯಾಂಕ ಮಾತನಾಡಿದರು.

ಉಪನ್ಯಾಸಕರಾದ ಈಶ್ವರ ರೆಡ್ಡಿ, ಡಾ. ಪಂಡಿತ ಗಂಗಶೆಟ್ಟಿ, ಡಾ. ನಾಗೇಂದ್ರಪ್ಪ, ರವಿ, ಡಾ. ಅನ್ನಪೂರ್ಣ, ಅರ್ಚನಾ, ರೇಣುಕಾ, ಪ್ರಿಯಾಂಕ, ಸಿಬ್ಬಂದಿ ಶಂಕರ, ಮಹೇಶ, ಮಲ್ಲಿಕಾರ್ಜುನ, ಲಕ್ಷ್ಮಿ ಮತ್ತಿತರರು ಇದ್ದರು. ಉಪನ್ಯಾಸಕಿ ಶ್ರೀಲತಾ ನಿರೂಪಿಸಿದರು. ಪ್ರೇಮಲತಾ ವಂದಿಸಿದರು.