ಬೀದರ್: ರಾಷ್ಟ್ರೀಯ ಬಸವ ದಳದ ಜಿಲ್ಲಾ ಯುವ ಘಟಕ ಹಾಗೂ ಡಾ. ಮಾತೆ ಮಹಾದೇವಿ ಬಸವ ಬಳಗದ ಕಚೇರಿಯನ್ನು ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಸಮೀಪ ಉದ್ಘಾಟಿಸಲಾಯಿತು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಸಸಿಗೆ ನೀರೆರೆದು ಉದ್ಘಾಟನೆ ನೆರವೇರಿಸಿದರು.
ಬಸವ ದಳ ಹಾಗೂ ಡಾ. ಮಾತೆ ಮಹಾದೇವಿ ಬಸವ ಬಳಗದ ಕಚೇರಿ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಸಂಘಟನೆ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲ ಇರಲಿದೆ ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಬಸವ ದೇವರು ಮಾತನಾಡಿ, ಸುಂದರ ಜೀವನಕ್ಕೆ ಎಲ್ಲರೂ ಬಸವಣ್ಣನವರ ತತ್ವಗಳನ್ನು ಪಾಲಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಮಾತೆ ಮಹಾದೇವಿ ಬಸವ ಬಳಗದ ಅಧ್ಯಕ್ಷ ಗುರುಪಾದಪ್ಪ ಸಿರ್ಸಿ ಮಾತನಾಡಿ, ಬಳಗವು ಬಸವಣ್ಣನವರ ತತ್ವಗಳ ಪ್ರಚಾರ ಹಾಗೂ ಪ್ರಸಾರದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ತಿಳಿಸಿದರು.
ಸಿದ್ರಾಮ ಶೆಟಕಾರ್ ಮಾತನಾಡಿ, ಬಸವ ದಳದ ಜಿಲ್ಲಾ ಯುವ ಘಟಕವು ಒಂದು ವರ್ಷದ ಅವಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಬಸವ ತತ್ವ ಪ್ರಚಾರ ಸಭೆ, ಉದ್ಯೋಗ ಮೇಳ, ಆಧ್ಯಾತ್ಮಿಕ ಶಿಬಿರ, ರಕ್ತದಾನ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲ್ ಪಾಟೀಲ ಗಾದಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಜೈರಾಜ ಖಂಡ್ರೆ, ಬಸವ ದಳದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗಣೇಶ ಬಿರಾದಾರ ಮತ್ತಿತರರು ಇದ್ದರು.
ಸುನೀತಾ ಅಶೋಕ ಶೀಲವಂತ ದಂಪತಿ ಗುರು ಬಸವ ಪೂಜೆ ನೆರವೇರಿಸಿದರು. ಜೆ.ಕೆ. ಸ್ವಾಮಿ, ನಂದಕುಮಾರ ಪಾಟೀಲ ಪ್ರಾರ್ಥನೆ ನಡೆಸಿಕೊಟ್ಟರು. ಡಾ. ಸಂಗಶೆಟ್ಟಿ ಶೆಟಕಾರ್ ಸ್ವಾಗತಿಸಿದರು. ಪ್ರವೀಣಕುಮಾರ ಎಕಲಾರೆ ನಿರೂಪಿಸಿದರು.