ಜಿಲ್ಲೆ

ಶನಿವಾರ ಶಾಲಾ ಅವಧಿ ಬದಲಿಸಿ

ರೇವಣಸಿದ್ದಪ್ಪ ಪಾಟೀಲ್
ಬೀದರ್: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶನಿವಾರದ ಅವಧಿ ಬದಲಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಶಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದ ಶನಿವಾರ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 12 ರ ವರೆಗೆ ತರಗತಿ ನಡೆಸಲಾಗುತ್ತಿದೆ. ಆದರೆ, ಈ ಅವಧಿ ಅನುಕೂಲಕರವಾಗಿರದ ಕಾರಣ ಅರ್ಧಕ್ಕೂ ಹೆಚ್ಚು ಮಕ್ಕಳು ವಿಳಂಬ ಇಲ್ಲವೇ ಗೈರು ಹಾಜರಾಗುತ್ತಿದ್ದಾರೆ ಎಂದು ಗಮನ ಸೆಳೆದರು.
ಶಿಕ್ಷಕರು ಸಕಾಲಕ್ಕೆ ಹಾಜರಾಗುತ್ತಿದ್ದರೂ, ಶಾಲೆ ಅವಧಿ ಬೇಗ ಇರುವುದರಿಂದ ವಾಹನ ಸೌಕರ್ಯ ಹಾಗೂ ಇತರ ಕಾರಣಗಳಿಂದ ಬಹಳಷ್ಟು ಮಕ್ಕಳಿಗೆ ಶಾಲೆಗೆ ಬರಲು ವಿಳಂಬವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ವಿಶೇಷವಾಗಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ತಿಳಿಸಿದರು.
ಕಳೆದ ಶೈಕ್ಷಣಿಕ ವರ್ಷದಂತೆ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ತರಗತಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಉಪಾಧ್ಯಕ್ಷ ಸೂರ್ಯಕಾಂತ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಶಕೀಲ್ ಜಾಫ್ರಿ, ಅಧ್ಯಕ್ಷ ವೈಜಿನಾಥ ಸಾಳೆ, ಪ್ರಧಾನ ಕಾರ್ಯದರ್ಶಿ ಬಲವಂತರಾವ್ ರಾಠೋಡ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಸಾಗರ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಬಾಪುರೆ, ಪ್ರಮುಖರಾದ ಎಂ.ಡಿ. ಶಾಬುದ್ದೀನ್, ಶಾಮಸುಂದರ ಖಾನಾಪುರೆ, ಸಂಜೀವ್ ರಾಜನಾಳೆ, ಜೈಸಿಂಗ್ ಠಾಕೂರ್ ಇದ್ದರು.