ಬೀದರ್: ಬಗರ್ ಹುಕುಂ ಸಾಗುವಳಿಯಲ್ಲಿ ತೊಡಗಿರುವ ನೈಜ, ಅರ್ಹ ಅರ್ಜಿದಾರರಿಗೆ ಹಕ್ಕು ಪತ್ರಗಳನ್ನು ಒದಗಿಸುವ ಮೂಲಕ ನ್ಯಾಯ ದೊರಕಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭರವಸೆ ನೀಡಿದ್ದಾರೆ.
ಬೀದರ್ ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ಬಗರ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆ ಆಗದ ಕುರಿತು ಪ್ರಶ್ನೆ ಕೇಳಿ ಚರ್ಚಿಸಲಾಗಿತ್ತಿ ಇದೀಗ ಸಮಿತಿ ರಚನೆ ಮಾಡಲಾಗಿದ್ದು ಇಂದು ಹಲವು ವರ್ಷಗಳ ಬಳಿಕ ಸಮಿತಿ ಸಭೆ ನಡೆಸಲಾಗುತ್ತಿದೆ ಬಗರ್ ಹುಕುಂ ಸಾಗುವಳಿ ಸಕ್ರಮ ಸಂಬAಧ ಬಂದ ನೈಜ ಅರ್ಜಿದಾರರಿಗೆ ಅನ್ಯಾಯ ಆಗಬಾರದು. ನಿಯಮದಂತೆ ಇವರಿಗೆ ಹಕ್ಕು ಪತ್ರ ಸಿಗಬೇಕು. ಭೂ ಮಾಫಿಯಾ ಮತ್ತು ಅನರ್ಹರು ಸರ್ಕಾರಿ ಭೂಮಿ ಕಬಳಿಸುವುದನ್ನು ತಪ್ಪಿಸಲು ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಅರಣ್ಯ, ಕಂದಾಯ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವವರ ಎಲ್ಲ ಅರ್ಜಿಗಳನ್ನು ಅಕ್ರಮ–ಸಕ್ರಮ ಯೋಜನೆಯಡಿ ಪರಿಶೀಲಿಸಲಾಗುವುದು. ಈ ಬಗ್ಗೆ ಯಾವ ರೈತರೂ ಆತಂಕ ಪಡುವ ಅಗತ್ಯ ಇಲ್ಲ. ಎಲ್ಲ ಸರ್ವೆ ನಂಬರ್, ಜಮೀನಿನ ಮಾಹಿತಿಯನ್ನು ಜಿಪಿಎಸ್ ಮೂಲಕ ಆನ್‌ಲೈನ್‌ನಲ್ಲಿಯೇ ನೋಂದಣಿ ಕಾರ್ಯ ನಡೆಯಲಿದೆ. ಯಾರಿಗೂ ಅನಗತ್ಯ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ಬಗರ್ ಹುಕುಂ ಅಡಿ ಸಾಕಷ್ಟು ಅರ್ಜಿ ತಿರಸ್ಕೃತವಾಗುತ್ತಿವೆ. ಇವುಗಳನ್ನು ಪುನಃ ಪರಿಶೀಲನೆ ನಡೆಸಬೇಕು. ಭೂ ಮಂಜೂರಾತಿ ನೀಡಲು ಅಡ್ಡಿಯಾಗಿರುವ ಕಾನೂನು ತೊಡಕುಗಳ ನಿವಾರಣೆಗೂ ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.
ಬಗರ್ ಹುಕುಂ ಅರ್ಜಿಗಳು ಭಾರಿ ಸಂಖ್ಯೆಯಲ್ಲಿ ತಿರಸ್ಕೃತಗೊಳ್ಳಲು ಕಾರಣವೇನು ಮತ್ತು ಇಲ್ಲಿವರೆಗೆ ಸ್ವೀಕೃತಿಯಾಗಿರುವ ಅರ್ಜಿಗಳ ಬಗ್ಗೆ ಮಾಹಿತಿ ನೀಡಬೇಕು. ಅರಣ್ಯ, ಕಂದಾಯ, ಗೋಮಾಳ ಯಾವುದೇ ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಯಾರಿಗೂ ಅನ್ಯಾಯವಾಗದಂತೆ ಪಾರದರ್ಶಕವಾಗಿ ಪರಿಶೀಲನೆ ಮಾಡಿ ನಿಯಮಾನಸಾರ ಅರ್ಹರಿಗೆ ಸಾಗುವಳಿ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಅಧಿಕಾರಿಗಳಿಂದ ತಪ್ಪುಗಳು ಆಗಿದ್ದರೆ, ಅದನ್ನು ಸರಿಪಡಿಸಲು ಅವಕಾಶವಿದೆ ಎನ್ನುವುದರ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಮುಂದಿನ ಸಭೆಯಲ್ಲಿ ಯಾವ ಕಾರಣಗಳಿಗೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂಬುದರ ಬಗ್ಗೆ ಪಟ್ಟಿ ಸಮೇತ ಅಧಿಕಾರಿಗಳು ಹಾಜರಿರಲು ಸೂಚನೆ ನೀಡಿದರು.
ರೈತರು ಅಕ್ರಮ– ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ, ಸಾಗುವಳಿ ಮಾಡುತ್ತಿರುವ ಜಮೀನಿನ ಹಕ್ಕು ದಾಖಲೆಗಳ ನಿರೀಕ್ಷೆಯಲ್ಲಿದ್ದಾರೆ. ಆದರೆ, ಸರ್ಕಾರ ಅರ್ಜಿ ಮಂಜೂರಾತಿ ಪ್ರಕ್ರಿಯೆಗೆ ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದು, ವಿವಿಧ ಕಾರಣಗಳಿಗೆ ಈ ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಮುಂದೆ ಮಂಡಿಸದೇ ಅಧಿಕಾರಿಗಳೆ ತಿರಸ್ಕರಿಸಲಾಗುತ್ತಿರುವುದು ಸರಿಯಲ್ಲ. ಈ ನಿಯಮಗಳ ಸಡಿಲಿಕೆ ಜೊತೆಗೆ ಅರ್ಹ ಅರ್ಜಿದಾರರಿಗೆ ಬೇಗ ನ್ಯಾಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತಕರಾದ ಮೊಹಮ್ಮದ್ ಶಕೀಲ್, ತಹಶೀಲ್ದಾರ ದಿಲಶಾನ್ ಮಹಂತ, ವಲಯ ಅರಣ್ಯ ಅಧಿಕಾರಿ ವಿಜಯಕುಮಾರ, ಸಮಿತಿ ಸದಸ್ಯರಾದ ನಂದಕುಮಾರ ಪಾಟೀಲ್, ಲಕ್ಷö್ಮಣ ಪಾತರಪಳ್ಳಿ, ಅನುರಾಧ ಗಂಡ ಕೃಷ್ಣ ಇದ್ದರು.