ಬೀದರ್: ಹಲವು ವರ್ಷಗಳಿಂದ ಜಿಲ್ಲೆಯಲ್ಲೇ ಠಿಕಾಣಿ ಹೂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಾನಸನ್ ಘೋಡೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮುಖ್ಯಮಂತ್ರಿ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪೌರಾಡಳಿತ ಸಚಿವರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.
ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಸರ್ಕಾರದ ನಿಯಮಾನುಸಾರ ಅವಧಿ ಪೂರ್ಣಗೊಂಡರೂ ಹಲವು ವರ್ಷಗಳಿಂದ ಜಿಲ್ಲೆಯಲ್ಲೇ ಬೀಡು ಬಿಟ್ಟಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ನಿಯಮಾನುಸಾರ ವರ್ಗಾವಣೆ ಅವಧಿ ಪೂರ್ಣಗೊಳ್ಳುವ ಹಂತದಲ್ಲಿ ಬೇರೆ ಇಲಾಖೆಗೆ ನಿಯೋಜನೆ ಮೇಲೆ ತೆರಳಿ, ನಂತರ ಮಾತೃ ಇಲಾಖೆಗೆ ಮರು ನಿಯೋಜನೆ ಹೊಂದುತ್ತಿದ್ದಾರೆ. ಮಾರ್ಗಸೂಚಿಯ ನ್ಯೂನ್ಯತೆಗಳನ್ನು ಬಳಸಿಕೊಂಡು ಮೇಲಧಿಕಾರಿಗಳ ಜತೆ ಶಾಮೀಲಾಗಿ ಸರ್ಕಾರದ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಈ ವಿಷಯ ಜಿಲ್ಲಾಧಿಕಾರಿ ಅವರ ಗಮನದಲ್ಲಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.
ಅವಧಿ ಪೂರೈಸಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿ ಸಾರ್ವಜನಿಕರ ಹಿತ ರಕ್ಷಿಸಬೇಕು ಎಂದು ಕೋರಿದರು. ಪ್ರಮುಖರಾದ ರತ್ನದೀಪ ಕಸ್ತೂರೆ, ರೋಹಿತ್ ಕಾಂಬಳೆ ಹಾಗೂ ಗುರುದಾಸ್ ಇದ್ದರು.