ಜಿಲ್ಲೆ

ರೋಗಗಳ ನಿಯಂತ್ರಣ ಬಗ್ಗೆ ಎಚ್ಚರಿಕೆ ವಹಿಸಿ

ರೇವಣಸಿದ್ದಪ್ಪ ಪಾಟೀಲ್

ಔರಾದ್: ಮಳೆಗಾಲ ಆರಂಭವಾಗಿದ್ದರಿಂದ ಕೆಲವೆಡೆ ವಾಂತಿ-ಭೇದಿ ಪ್ರಕರಣ ಕಂಡುಬಂದಿದ್ದು, ರೋಗಗಳ ಹತೋಟಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ದೂರವಾಣಿಯಲ್ಲಿ ಮಾತನಾಡಿದ ಅವರು, ಮಳೆಗಾಲ ಸಂದರ್ಭದಲ್ಲಿ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತದೆ. ಈ ನೀರು ಕುಡಿಯುವ ನೀರಿನಲ್ಲಿ ಬೆರೆತರೆ ನಾನಾ ರೀತಿಯ ರೋಗಗಳಿಗೆ ಕಾರಣವಾಗುತ್ತದೆ. ಹೀಗಾಗಿ ಎಲ್ಲೂ ಕೊಳಚೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ಒಡೆದ ಪೈಪ್ಗಳನ್ನು ಸರಿಪಡಿಸುವುದರ ಜತೆಗೆ ಸಣ್ಣ-ಪುಟ್ಟ ಸಮಸ್ಯೆಗಳನ್ನು ತಕ್ಷಣ ಗ್ರಾಮ ಪಂಚಾಯಿತಿ ಪರಿಹರಿಸಲು ತಮ್ಮ ವ್ಯಾಪ್ತಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಹೇಳಿದ್ದಾರೆ.

ಹಲವೆಡೆ ಚರಂಡಿ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಚರಂಡಿ, ತಗ್ಗು-ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆ ಹಾವಳಿ ಹೆಚ್ಚಾಗಿ ಡೆಂಘೆ, ಮಲೇರಿಯಾದಂಥ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಗ್ರಾಪಂ ಪಿಡಿಒಗಳು ಚುರುಕಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಎಲ್ಲ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಸಮರೋಪಾದಿಯಲ್ಲಿ ನಡೆಸಬೇಕು. ರಸ್ತೆ, ಬೀದಿಗಳನ್ನು ಶುಚಿಯಾಗಿಡಬೇಕು. ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಜನತೆಗೆ ಪ್ರತಿದಿನ ಸ್ವಚ್ಛ ನೀರು ಪೂರೈಸಬೇಕು. ತಾಪಂ ಇಒಗಳು ಕಚೇರಿಗೆ ಸೀಮಿತವಾಗದೆ ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.

ಆರೋಗ್ಯ ಇಲಾಖೆ ಜವಾಬ್ದಾರಿ ಹೆಚ್ಚಿನ ಪ್ರಮಾಣದಲ್ಲಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಬೇಕು. ತಾಲೂಕು ವೈದ್ಯಾಕಾರಿಗಳು ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಬೇಕು. ಮಳೆಗಾಲದಲ್ಲಿ ಹರಡುವ ರೋಗ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಚ್ಚುಕಟ್ಟಾಗಿ ಆಗಬೇಕು ಡಿಎಚ್ಒಗೆ ಸಲಹೆ ನೀಡಿದ್ದಾರೆ.

ಮಳೆಗಾಲದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮನೆ ಮತ್ತು ಸುತ್ತಲಿನ ಪರಿಸರ ಶುಚಿಯಾಗಿಡಬೇಕು. ಮಳೆ ನೀರು ನಿಲ್ಲದಂತೆ, ತೊಟ್ಟಿಗಳಲ್ಲಿ ನೀರು ಬಹಳ ಕಾಲದವರೆಗೆ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಸಮಸ್ಯೆ ಕಾಣಿಸಿದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ ಜನರು ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದ್ದಾರೆ.