ಜಿಲ್ಲೆ

₹ 41.94 ಲಕ್ಷ ಸ್ವತ್ತು ಜಪ್ತಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲೆಯ ವಿವಿಧ ಠಾಣೆ ವ್ಯಾಪ್ತಿಯಲ್ಲಿ ನಡೆದ 11 ಕಳವು ಪ್ರಕರಣ ಭೇದಿಸಿರುವ ಖಾಕಿ ಪಡೆ, 41.94 ಲಕ್ಷ ರೂ. ಸ್ವತ್ತು ಜಪ್ತಿ ಮಾಡಿಕೊಂಡಿದೆ.

ಬಸವಕಲ್ಯಾಣ ನಗರ ಠಾಣೆ ವ್ಯಾಪ್ತಿಯ ಮೂರು ಪ್ರಕರಣ, ಬೀದರ್ ಗಾಂಧಿಗಂಜ್ ಠಾಣೆಯ ಎರಡು, ಹುಮನಾಬಾದ್, ಮಂಠಾಳ, ಧನ್ನೂರ, ಖಟಕ ಚಿಂಚೋಳಿ, ಭಾಲ್ಕಿ ಗ್ರಾಮೀಣ ಹಾಗೂ ಮನ್ನಳ್ಳಿ ಠಾಣೆಯ ತಲಾ ಒಂದು ಕೇಸ್ ಪತ್ತೆ ಹಚ್ಚಿ 22 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಬಸವಕಲ್ಯಾಣ ನಗರ ಠಾಣೆಯ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 5.90 ಲಕ್ಷ ಮೌಲ್ಯದ ವಿವಿಧ ಕಂಪನಿಯ ಒಂಬತ್ತು ಮೋಟಾರ್ ಸೈಕಲ್, 90 ಸಾವಿರದ ಚಿನ್ನಾಭರಣ, ನಗದು 2000 ರೂ. ಜಪ್ತಿ ಮಾಡಿ ನಾಲ್ವರನ್ನು ಬಂಧಿಸಲಾಗಿದೆ. ಬೀದರ್ ನ ಗಾಂಧಿಗಂಜ್ ಠಾಣೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 11.73 ಲಕ್ಷದ ಚಿನ್ನಾಭರಣ, ಒಂದು ಬೈಕ್ ವಶಪಡಿಸಿಕೊಂಡು ಮೂವರ ಬಂಧನ, ಮಂಠಾಳ ಠಾಣೆಯ ಕಳವು ಕೇಸ್ ಸಂಬಂಧ 4 ಲಕ್ಷದ ಚಿನ್ನಾಭರಣ ಜಪ್ತಿ ಮಾಡಿ ನಾಲ್ವರ ಬಂಧನ, ಖಟಕ ಚಿಂಚೋಳಿ ಠಾಣೆ ಕೇಸ್ನಲ್ಲಿ ಐದು ಲಕ್ಷ ಮೌಲ್ಯದ ಕಾರು, 68 ಸಾವಿರ ನಗದು ಸೇರಿ 5.68 ಲಕ್ಷದ ಸ್ವತ್ತು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಧನ್ನೂರ ಠಾಣೆಯ ಕಳವು ಪ್ರಕರಣದಲ್ಲಿ 4.50 ಲಕ್ಷದ ಟಿಪ್ಪರ್ ಜಪ್ತಿ, ಹುಮನಾಬಾದ್ ಠಾಣೆ ಕಳವು ಪ್ರಕರಣದಲ್ಲಿ 1.19 ಲಕ್ಷದ ಚಿನ್ನಾಭರಣ ಜಪ್ತಿ ಮಾಡಿ ಇಬ್ಬರ ಬಂಧಿಸಲಾಗಿದೆ. ಭಾಲ್ಕಿ ಗ್ರಾಮೀಣ ಠಾಣೆ ಕಳವು ಪ್ರಕರಣದಲ್ಲಿ ಮೂರು ಲಕ್ಷ ರೂ. ಮೌಲ್ಯದ ಬುಲೆರೋ ಪಿಕಪ್ ವಾಹನ, ಒಂದು ಲಕ್ಷದ ಕಾರು, 3 ಲಕ್ಷ ನಗದು ಸೇರಿ ಏಳು ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿ ಮೂವರ ಬಂಧನ ಹಾಗೂ ಮನ್ನಳ್ಳಿ ಠಾಣೆಯಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲಿ 72 ಸಾವಿರ ಮೌಲ್ಯದ ಬಂಗಾರ, 30 ಸಾವಿರದ ಒಂದು ಬೈಕ್ ವಶಪಡಿಸಿಕೊಂಡು ಇಬ್ಬರ ಬಂಧನ ಮಾಡಲಾಗಿದೆ ಎಂದು ಎಸ್ಪಿ ಗುಂಟಿ ವಿವರಿಸಿದ್ದಾರೆ.