ಔರಾದ್: ಕಲುಷಿತ ನೀರು ಸೇವಿಸಿ ವಾಂತಿ ಭೇದಿಯಿಂದ ನಾಲ್ವರು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ತಾಲೂಕಿನ ಜೋಜನಾ ಗ್ರಾಪಂ ವ್ಯಾಪ್ತಿಯ ನಾಗೂರ(ಎಂ) ಗ್ರಾಮಕ್ಕೆ ಬುಧವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸಮಪರ್ಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕಲುಷಿತ ನೀರು ರಸ್ತೆಗಳಲ್ಲಿ ಸಂಗ್ರಹವಾಗಿ ವಿಪರಿತ ಸೊಳ್ಳೆಗಳ ಕಾಟದಿಂದ ಜನರು ಸಾಂಕ್ರಮಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಗ್ರಾಮದಲ್ಲಿ ನೀರಿನ ಸೌಕರ್ಯ ಕಲ್ಪಿಸುವ ಪೈಪ್ ಲೈನ್ ಒಡೆದಿದ್ದರಿಂದ ಅದರಲ್ಲಿ ಹೊಲಸು ಸೇರಿದೆ. ಈ ನೀರು ಮನೆಗಳಿಗೆ ಪೂರೈಕೆಯಾಗಿದ್ದರಿಂದ ನಾಲ್ವರು ವಾಂತಿ ಭೇದಿಗೆ ಒಳಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ಅರಿತು ಅಕಾರಿಗಳು ವಿವಿಧ ಓಣಿಗಳಿಗೆ ಭೇಟಿ ನೀಡಿದರು.
ನೀರಿನ ಸ್ಯಾಂಪಲ್ ಸಂಗ್ರಹ ಮಾಡಿ ತಪಾಸಣೆಗೆ ಒಳಪಡಿಸಲಾಗುವುದು. ಗ್ರಾಮದಲ್ಲಿ ಹೆಚ್ಚಿನ ರೋಗ ಉಲ್ಭಣಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವಾರ ಆರೋಗ್ಯ ಕ್ಯಾಂಪ್ ಹಾಕಿ ತಪಾಸಣೆ ಮಾಡಲಾಗುವುದು ಎಂದು ಟಿಎಚ್ಒ ಡಾ.ಗಾಯತ್ರಿ ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ಶೀಘ್ರದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಡಾ.ಪ್ರಭುಲಿಂಗ , ಪಿಡಿಒ ನರಸಿಂಗ ಮಾನೆ, ಖಾದರ್ ಖಾನ್, ಸಿಸ್ಟರ್ ತಸ್ಲೀಮ್ ಇತರರಿದ್ದರು.