ಜಿಲ್ಲೆ

ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಖ್ಯಾಮಾಗೆ ಸನ್ಮಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ವೀರಶೆಟ್ಟಿ ಖ್ಯಾಮಾ ಅವರನ್ನು ನಾಟ್ಯಶ್ರೀ ನೃತ್ಯಾಲಯ ವತಿಯಿಂದ ನಗರದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.

ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಹಾಗೂ ನಿರ್ದೇಶಕ ಕೆ. ಸತ್ಯಮೂರ್ತಿ ಖ್ಯಾಮಾ ದಂಪತಿಯನ್ನು ಶಾಲು ಹೊದಿಸಿ ಸತ್ಕರಿಸಿದರು. ಪತ್ರಿಕಾ ರಂಗ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಹಿರಿಯ ಪತ್ರಕರ್ತ ಸದಾನಂದ ಜೋಶಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಖ್ಯಾಮಾ ಅವರ ಹಿಂದು ಸಮಾಜದ ಹಿತಕ್ಕಾಗಿ ಶ್ರಮಿಸುತ್ತಾ ಬಂದಿದ್ದಾರೆ. ಸಭೆ, ಸಮಾರಂಭಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದ್ದಾರೆ. ಅವರನ್ನು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಸತ್ಯಮೂರ್ತಿ ಹೇಳಿದರು.

ಖ್ಯಾಮಾ ಅವರ ಹಿಂದೆ ಯುವಕರ ಪಡೆ ಇದೆ. ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಹಿಂದು ಪರ ಚಟುವಟಿಕೆಗಳು ಹೆಚ್ಚು ನಡೆಯಲಿವೆ. ಸಮಾಜದ ಸಂಘಟನೆ ಬಲಗೊಳ್ಳಲಿದೆ. ಯುವಕರಲ್ಲಿ ದೇಶಾಭಿಮಾನ ಮೂಡಿಸುವ ಕೆಲಸ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸಮಾಜದ ಹಿತದ ಕಾರ್ಯಗಳನ್ನು ಕೈಗೊಳ್ಳೋಣ ಎಂದು ವೀರಶೆಟ್ಟಿ ಖ್ಯಾಮಾ ಹೇಳಿದರು.

ಪ್ರಮುಖರಾದ ರವಿಚಂದ್ರ ಮೂರ್ತಿ, ಬಸವರಾಜ ಮೂಲಗೆ, ದೇವಿದಾಸ ಜೋಶಿ ಮತ್ತಿತರರು ಇದ್ದರು.