ಬೀದರ್: ಭಾರತೀಯ ಅಂಚೆ ಇಲಾಖೆಯು ತನ್ನ ಸಿಬ್ಬಂದಿಗೆ ಉಚಿತ ಸಸಿ ವಿತರಿಸುವ ಮೂಲಕ ವಿಶ್ವ ಪರಿಸರ ದಿನವನ್ನು ನಗರದಲ್ಲಿ ಗುರುವಾರ ಅರ್ಥಪೂರ್ಣವಾಗಿ ಆಚರಿಸಿತು.
ಪ್ರಧಾನ ಅಂಚೆ ಕಚೇರಿಯಲ್ಲಿ ಬೀದರ್ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ ಸಿಬ್ಬಂದಿಗೆ ಸಸಿ ವಿತರಿಸಿದರು. ಕಚೇರಿ ಆವರಣದಲ್ಲೂ ಸಸಿಗಳನ್ನು ನೆಟ್ಟರು.
ಅಂಚೆ ಸಿಬ್ಬಂದಿ ಪರಿಸರ ಸ್ನೇಹಿಯಾಗಿ ಬದುಕು ಸಾಗಿಸಬೇಕು. ತಮ್ಮ ಮನೆ ಪರಿಸರದಲ್ಲಿ ತಲಾ ಒಂದು ಸಸಿ ನೆಡಬೇಕು ಎಂದು ವಿ.ಎಲ್. ಚಿತಕೋಟೆ ಸಲಹೆ ಮಾಡಿದರು.
ಮಾನವನ ಉಳಿವಿಗೆ ಪ್ರಕೃತಿ ಸಂರಕ್ಷಣೆ ಅಗತ್ಯವಾಗಿದೆ. ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಅಂಚೆ ಉಪ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಲೆಫ್ಟಿನೆಂಟ್ ಕರ್ನಲ್ ನಾಗರಾಜ ತಿಳಿಸಿದರು.
ಪ್ರಧಾನ ಅಂಚೆ ಪಾಲಕ ರಾಜೇಂದ್ರ ವಗ್ಗೆ, ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ವಿಜಯಕುಮಾರ ಫುಲೆ ಮತ್ತಿತರರು ಇದ್ದರು.