ಜಿಲ್ಲೆ

ಮಕ್ಕಳಿಗೆ ಹೂ ಮಳೆಗೈದು ಸ್ವಾಗತ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಗುರುವಾರ ವಿಶಿಷ್ಟವಾಗಿ ಆಚರಿಸಲಾಯಿತು.

ಗಣ್ಯರು ಹಾಗೂ ಶಿಕ್ಷಕರು ಶಾಲೆಗೆ ಬಂದ ಮಕ್ಕಳಿಗೆ ಮುಖ್ಯದ್ವಾರದಲ್ಲೇ ಹೂ ಮಳೆಗೈದು ಸ್ವಾಗತಿಸಿ ಬರಮಾಡಿಕೊಂಡರು. ನಂತರ ಮಂಗಳೂರಿನ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ ಜಾದೂ ಪ್ರದರ್ಶನದ ಮೂಲಕ ಮಕ್ಕಳನ್ನು ಮೂಕಸ್ಮಿತರಾಗಿಸಿದರು.

‘ಮ್ಯಾಜಿಕ್ ಫಾರ್ ನಾಲೇಜ್' ಶೀರ್ಷಿಕೆಯಡಿ ಜಾದೂ ಪ್ರದರ್ಶಿಸಿದ ಅವರು, ಮಕ್ಕಳನ್ನು ಜ್ಞಾನದ ಲೋಕಕ್ಕೆ ಕರೆದೊಯ್ದರು. ಏಕಾಗ್ರತೆ, ಬುದ್ಧಿವಂತಿಕೆ, ಜ್ಞಾನ ಹೆಚ್ಚಿಸಿಕೊಳ್ಳುವ ತಂತ್ರಗಳನ್ನು ಹೇಳಿಕೊಟ್ಟರು.

ಜಾದೂ ಪ್ರದರ್ಶನಕ್ಕೆ ಮಕ್ಕಳನ್ನೂ ಬಳಸಿಕೊಂಡದ್ದು ವಿಶೇಷವಾಗಿತ್ತು. ಗಣೇಶ ಅವರ ಒಂದು ತಾಸಿನ ಜಾದೂ ಪ್ರದರ್ಶನ ಮಕ್ಕಳು ಆನಂದದಲ್ಲಿ ತೇಲಾಡುವಂತೆ ಮಾಡಿತು.

ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಭಾರತಿ ಕರ್ನಾಟಕದ ಕಲಬುರಗಿ ವಿಭಾಗ ಪ್ರಮುಖ ಮಹಿಪಾಲ್ ರೆಡ್ಡಿ, ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಶಾಲೆಯ ಶಿಕ್ಷಕರಿಗೆ ಆಯೋಜಿಸಿದ್ದ ಮೂರು ದಿನಗಳ ಪುನಃಶ್ಚೇತನ ಶಿಬಿರದ ಸಮಾರೋಪವೂ ಇದೇ ವೇಳೆ ನಡೆಯಿತು.