ಜಿಲ್ಲೆ

ಅಕ್ಕ ಅನ್ನಪೂರ್ಣತಾಯಿ ಯಶೋಗಾಥೆ ಆದರ್ಶವಾಗಲಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಅಕ್ಕ ಅನ್ನಪೂರ್ಣತಾಯಿ ಅವರ ಯಶೋಗಾಥೆ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ಬಸವಕಲ್ಯಾಣದ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ನುಡಿದರು.

ಇಲ್ಲಿಯ ಬಸವಗಿರಿಯಲ್ಲಿ ಲಿಂಗಾಯತ ಮಹಾ ಮಠದ ವತಿಯಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವದಲ್ಲಿ ಅನುಭಾವ ಮಂಡಿಸಿದ ಅವರು, ಅಕ್ಕ ಅನ್ನಪೂರ್ಣತಾಯಿ ಬಸವ ಧರ್ಮದ ಸಂತಾನ ಎಂದರು.

ಅಕ್ಕ ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ಬಸವ ತತ್ವ ಉಳಿಸಲು, ಬೆಳೆಸಲು ಸಮರ್ಪಿತರಾಗಿದ್ದರು. ಜನರಿಗೆ ಮೌಲ್ಯಭರಿತರಾಗಿ ಬದುಕಲು ಕಲಿಸಿದರು. ತಾವು ಕಲ್ಲು ಮುಳ್ಳು ತುಳಿದು ನಮಗೆ ಶಾಂತಿ, ಸಮಾಧಾನ ನೀಡಿದರು ಎಂದು ಹೇಳಿದರು.

ಗದಗ ಶ್ರೀ, ಇಳಕಲ್ ಶ್ರೀ,  ಮಾತಾಜಿ, ಅಕ್ಕನವರು ಬಸವ ಕರುಳ ಬಳ್ಳಿಗಳು. ಅವರ ನಿರ್ಗಮನದಿಂದ ಒಂದು ರೀತಿಯ ಶೂನ್ಯ ಆವರಿಸಿದೆ. ಅವರ ಅಗಲಿಕೆಯ ನೋವು ಸಹಿಸಲು ಶರಣರ ವಚನಗಳೇ ಬೇಕು. ವಚನಗಳು ಜನ್ಮದ ಬುತ್ತಿ ಎಂದು ತಿಳಿಸಿದರು.

ಅಕ್ಕನಂತಹ ಶರಣರು ಸುಮ್ಮನೆ ಬಂದವರಲ್ಲ. ಪರಮಾತ್ಮ ಭಾವದಲ್ಲಿ ಬಂದು ಬಸವತತ್ವ ಸಾರಿದ ಸದ್ಗುರು. ಶಿಸ್ತು ಮತ್ತು ತತ್ವ ನಿಷ್ಠೆಗೆ ಇನ್ನೊಂದು ಹೆಸರೇ ಅಕ್ಕ ಅನ್ನಪೂರ್ಣ ಎಂದು ಹೇಳಿದರು.

ಬಸವಣ್ಣನವರನ್ನು 52 ಬಗೆಯಲ್ಲಿ ಬಣ್ಣಿಸಿದ ಪ್ರತಿಭಾವಂತೆ. ಅದ್ಭುತ ಸಂಘಟನಾ ಚತುರರು. ಹೆಣ್ಣುಮಕ್ಕಳನ್ನು ಮನೆಯಿಂದ ಹೊರ ತಂದು ತಲೆ ಮೇಲೆ ವಚನಗಳನ್ನು ಇಟ್ಟರು. ವಚನಗಳಿಗೆ ಪಟ್ಟಗಟ್ಟಿ ಭಕ್ತರ ಹೃದಯದಲ್ಲಿ ನೆಲೆ ನಿಂತರು ಎಂದು ತಿಳಿಸಿದರು.

ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಸ್ಮರಣೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಅಕ್ಕ 15 ಪೈಸೆ ಕಾರ್ಡ್‍ನಲ್ಲಿ ನಿಮ್ಮೂರಿಗೆ ಬಸವಜ್ಯೋತಿ ಕಾರ್ಯಕ್ರಮಕ್ಕೆ ಬರುತ್ತೇವೆಂದು ಬರೆದು ಹೋಗಿ ಬಸವ ತತ್ವ ಬೀರಿದವರು ಎಂದು ಹೇಳಿದರು.

ಅಕ್ಕನವರ ಸಾಧನೆ ದೊಡ್ಡದು. ಅವರ ಗರಡಿಯಲ್ಲಿ ಬೆಳೆದವರಲ್ಲಿ ಅರ್ಪಣಾ ಭಾವ ಇದೆ ಎಂದು ತಿಳಿಸಿದರು.

ಕದಳಿಶ್ರೀ ಹಾಗೂ ಬಸವಶ್ರೀ ವಚನ ನೃತ್ಯ ಪ್ರದರ್ಶಿಸಿದರು. ಭಾತಂಬ್ರಾದ ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ, ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಜೈರಾಜ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು.

ಶರಣ ವಿಚಾರ ವಾಹಿನಿ ಸಂಸ್ಥೆಯ ಅಯ್ಯಾರ ಮಠಪತಿ, ಬಳ್ಳಾರಿಯ ಶಿವಪ್ರಕಾಶ ಅಂಗಡಿ, ಸಾಹಿತಿ ರಮೇಶ ಮಠಪತಿ ಮತ್ತಿತರರು ಇದ್ದರು.

ಪ್ರಕಾಶ ಮಠಪತಿ ಸ್ವಾಗತಿಸಿದರು. ರಾಜಕುಮಾರ ಪಾಟೀಲ ನಿರೂಪಿಸಿದರು.