ಜಿಲ್ಲೆ

ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ

ರೇವಣಸಿದ್ದಪ್ಪ ಪಾಟೀಲ್

ಔರಾದ್: ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ನಂತರ ಮಾತನಾಡಿದ ಚವ್ಹಾಣ್, ವೈರಿ ರಾಷ್ಟ್ರದ ಪ್ರಚೋದಿತ ಭಯೋತ್ಪಾದಕರ ದಾಳಿಯಿಂದ ದೇಶದ ಮುಗ್ಧ ಜನತೆ ಪ್ರಾಣ ಕಳೆದುಕೊಂಡಿದ್ದರು. ಇಂಥ ಪೈಶಾಚಿಕ ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಭಾರತ ಎಂದಿಗೂ ಶಾಂತಿ ಪರವಾದ ರಾಷ್ಟ್ರ. ಅದನ್ನೇ ದೌರ್ಬಲ್ಯವೆಂದು ಭಾವಿಸಿದವರಿಗೆ ಪ್ರಧಾನಿ ಮೋದಿ ನಮ್ಮ ತಾಕತ್ತು ಎಂಥದ್ದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಭಾರತದಲ್ಲಿ ಭಯೋತ್ಪಾದಕರಿಗೆ ಉಳಿಗಾಲವಿಲ್ಲ. ಶಾಂತಿ ಕದಡಲು ಯತ್ನಿಸಿದವರಿಗೆ ನಮ್ಮ ಸೈನಿಕರು ಸುಮ್ಮನೆ ಬಿಡಲ್ಲ, ಇನ್ಮುಂದೆ ವೈರಿ ರಾಷ್ಟ್ರಗಳ ಸಂಚು ವರ್ಕೌಟ್ ಆಗಲ್ಲ. ಭಾರತೀಯ ಯೋಧರು ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂಬ ಸಂದೇಶ ರವಾನಿಸಲಾಗಿದೆ. ದೇಶಕ್ಕಾಗಿ ಜೀವನ ಮುಡಿಪಾಗಿಡುವ ವೀರಯೋಧರ ಒಳಿತು ಬಯಸಿ ವಿಶೇಷ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಕೇರಬಾ ಪವಾರ್, ವೀರೇಶ ಅಲ್ಮಾಜೆ, ಖಂಡೋಬಾ ಕಂಗಟೆ, ಎಂ.ಡಿ. ಸಲಾವುದ್ದೀನ್, ಮಹಾದೇವ ಅಲ್ಮಾಜೆ, ಶಿವಾಜಿ ಬೋಗಾರ, ಸಂದೀಪ್ ಪಾಟೀಲ್ ಇತರರಿದ್ದರು.