ಜಿಲ್ಲೆ

ಸಮ ಸಮಾಜಕ್ಕೆ ಮಹಾತ್ಮರು ಬುನಾದಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮಹಾತ್ಮರಾದ ಬುದ್ಧ, ಬಸವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದ್ದರು ಎಂದು ಕಸಾಪ ದಕ್ಷಿಣ ಘಟಕ ಅಧ್ಯಕ್ಷ ಬಸವರಾಜ ಬಶೆಟ್ಟಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕ ಬೀದರ್ ದಕ್ಷಿಣ ಘಟಕ ವತಿಯಿಂದ ತಾಲೂಕಿನ ಬಾವಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಭಾರತದ ನೆಲದಲ್ಲಿ ಜನಿಸಿದ ಬುದ್ಧ, ಬಸವ ಹಾಗೂ ಡಾ.ಅಂಬೇಡ್ಕರ್ ಅವರು ವಿಶ್ವಮಾನ್ಯರು. ಅವರ ವಿಚಾರಧಾರೆಗಳಿಗೆ ಜಗತ್ತಿನಾದ್ಯಂತ ಮನ್ನಣೆ ಸಿಕ್ಕಿದೆ. ಸಮ ಸಮಾಜ ನಿರ್ಮಾಣಕ್ಕೆ ಈ ಮೂವರು ಮಹಾತ್ಮರು ಕೊಡುಗೆ ಅಪಾರ. ಅವರ ಜೀವನ ಮತ್ತು ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಶಾಮಣ್ಣಾ ಬಾವಗಿ ಮಾತನಾಡಿ, ದೇಶದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ, ಅಸಮಾನತೆ ಹಾಗೂ ಕಂದಾಚಾರಗಳ ವಿರುದ್ಧ ಬುದ್ಧ, ಬಸವಣ್ಣ ಹಾಗೂ ಡಾ.ಅಂಬೇಡ್ಕರ್ ಅವರು ಧ್ವನಿ ಎತ್ತಿದರು. ಸರ್ವರೂ ಸಮನಾಗಿ ಬಾಳಿ ಸೌಹಾರ್ದತೆಯಿಂದ ಇರಬೇಕು ಎಂದು ಹೇಳಿದರು.

ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಪಡೆದು ಉತ್ತೀರ್ಣರಾದ ಗ್ರಾಮದ ಬಸವಾಂಜಲಿ ವೀರಶೆಟ್ಟಿ ಭದ್ರಣ್ಣ (ಶೇ.98) ಅವರನ್ನು ಸನ್ಮಾನಿಸಲಾಯಿತು.

ಭದ್ರೇಶ್ವರ ಮಠದ ಶಿವಕುಮಾರ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತವೀರ ಹಜ್ಜರಗಿ, ಕಸಾಪ ದಕ್ಷಿಣ ಯುವ ಘಟಕ ಅಧ್ಯಕ್ಷ ಸಿದ್ಧಾರೂಢ ಭಾಲ್ಕೆ, ಪ್ರಮುಖರಾದ ಓಂಕಾರ ಉಪ್ಪಿ, ಸಂಗಮೇಶ ಹಜ್ಜರಗಿ, ರಾಜಕುಮಾರ ಪಾಟೀಲ್ ಚೇತನ್ ಸೋರಳ್ಳಿ, ಗುಂಡಯ್ಯ ಸ್ವಾಮಿ, ನಾಗಶೆಟ್ಟಿ ಅಳ್ಳಿ, ಶಿವಶರಣಪ್ಪ ರೇಶೆಟ್ಟಿ, ಕಂಠಯ್ಯ ಸ್ವಾಮಿ, ಪ್ರಭು ಕಾರಕನಳ್ಳಿ, ವೀರೇಶ ಬಮಣಿ ಇತರರಿದ್ದರು.