ಬೀದರ್: ಜನಿವಾರ ಧರಿಸಿದ್ದ ಕಾರಣಕ್ಕೆ ಸಿಇಟಿ ಪರೀಕ್ಷೆಗೆ ನಿರಾಕರಿಸಿದ್ದ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಬ್ರಾಹ್ಮಣ ಸಮಾಜ ವಿದ್ಯಾಥರ್ಿಗೆ ಅವಮಾನ ಮಾಡಿರುವುದನ್ನು ಬ್ರಾಹ್ಮಣ ಮಹಾಸಂಘ ಜಿಲ್ಲಾಧ್ಯಕ್ಷ ರಮೇಶ ಕುಲಕರ್ಣಿ ಖಂಡಿಸಿದ್ದಾರೆ.
ಕಲಬುರಗಿಯಲ್ಲಿ ಭಾನುವಾರ ನೀಟ್ ಪರೀಕ್ಷೆ ಬರೆಯಲು ತೆರಳಿದ್ದ ಬಸವಕಲ್ಯಾಣ ತಾಲೂಕಿನ ಶ್ರೀಪಾದ ಪಾಟೀಲ್ ಜನಿವಾರ ಧರಿಸಿದ್ದಕ್ಕೆ ಅವಮಾನಿಸಲಾಗಿದೆ. ಪರೀಕ್ಷಾ ಕೇಂದ್ರ ಸಿಬ್ಬಂದಿ ಜನಿವಾರವನ್ನು ಬಲವಂತವಾಗಿ ತೆಗೆದು ವಿದ್ಯಾರ್ಥಿಗೆ ಮಾನಸಿಕ ತೊಂದರೆ ನೀಡಿದ್ದಾರೆ. ಈ ಘಟನೆಗಳು ಸರಣಿಯಾಗಿ ನಡೆಯುತ್ತಿರುವುದು ಸರಿಯಲ್ಲ ಎಂದು ಅವರು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಈಚೆಗೆ ಬೀದರ್ನಲ್ಲಿ ಬ್ರಾಹ್ಮಣ ಸಮಾಜದ ಸುಚಿವೃತ್ ಕುಲಕರ್ಣಿ ಜನಿವಾರ ಧರಿಸಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ನಿರಾಕರಿಸಿದ್ದು, ದೇಶಾದ್ಯಂತ ಚರ್ಚೆ ಯಾದ ನಂತರ ಎಚ್ಚೆತ್ತ ಸರ್ಕಾರ ಕ್ರಮದ ಭರವಸೆ ನೀಡಿತು. ಇದೀಗ ಕಲಬುರಗಿಯಲ್ಲಿ ವಿಪ್ರ ವಿದ್ಯಾರ್ಥಿಗೆ ಅವಮಾನ ಮಾಡಿದ್ದು, ಇಂಥ ಧಾಮರ್ಿಕ ಅವಮಾನ ಸಹಿಸಲು ಆಗುವುದಿಲ್ಲ ಎಂದು ಗುಡುಗಿದ್ದಾರೆ.
ವಿದ್ಯಾರ್ಥಿಗೆ ಅವಮಾನಿಸಿದ್ದ ಕಲಬುರಗಿ ನೀಟ್ ಪರೀಕ್ಷಾ ಕೇಂದ್ರವಾದ ಸೇಂಟ್ ಮೇರಿ ಕಾಲೇಜಿನ ಮಾನ್ಯತೆ ರದ್ದುಪಡಿಸಬೇಕು. ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅನ್ಯಾಯಕ್ಕೆ ಒಳಗಾದ ಶ್ರೀಪಾದ ಪಾಟೀಲ್ಗೆ ನ್ಯಾಯ ಹಾಗೂ ಪರಿಹಾರ ಒದಗಿಸಬೇಕು. ಸಂವಿಧಾನಬದ್ಧ ಹಕ್ಕುಗಳ ಕುರಿತು ಪರೀಕ್ಷಾ ಸಿಬ್ಬಂದಿಗೆ ತರಬೇತಿ ನೀಡುವ ಯೋಜನೆ ಜಾರಿಗೊಳಿಬೇಕು ಎಂದು ಒತ್ತಾಯಿಸಿದ್ದಾರೆ.
ಕಲಬುರಗಿ ಘಟನೆ ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆಗಳ ಬ್ರಾಹ್ಮಣ ಸಂಘಟನೆಗಳನ್ನು ಒಗ್ಗೂಡಿಸಿ ಶಿಕ್ಷಣ ಸಚಿವಾಲಯದ ಮುಂದೆ ಧರಣಿ ಮಾಡಲಾಗುವುದು. ಘಟನೆ ಕುರಿತು ಮಾನವ ಹಕ್ಕು ಹಾಗೂ ರಾಷ್ಟ್ರೀಯ ಶಿಕ್ಷಣ ಆಯೋಗಕ್ಕೂ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.