ಜಿಲ್ಲೆ

ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಅನುದಾನ ಬಿಡುಗಡೆಗೆ ಬೆಲ್ದಾಳೆ ಆಗ್ರಹ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲೆಯಲ್ಲಿ ಬಿಸಿಲ ಪ್ರಕೋಪ ತೀವ್ರವಾಗಿದ್ದು, ಹಲವೆಡೆ ಕುಡಿಯುವ ನೀರಿನ ಭೀಕರ ಸಮಸ್ಯೆ ತಲೆದೋರಿದೆ. ಈ ಸಮಸ್ಯೆ ಎದುರಿಸಲು ಸರ್ಕಾರ ಕೂಡಲೇ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ ತುರ್ತಾಗಿ ತಲಾ ೧ ಕೋಟಿ ರೂ.(ಒಟ್ಟು ೬ ಕೋಟಿ ರೂ.) ಅನುದಾನ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದ್ದಾರೆ.

ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರತ್ಯೇಕ ಪತ್ರ ಬರೆದು ಸಮಸ್ಯೆ ಗಂಭೀರತೆ ಕುರಿತು ಗಮನ ಸೆಳೆದಿರುವ ಬೆಲ್ದಾಳೆ ಅವರು, ಜಿಲ್ಲೆಯ ನೂರಕ್ಕೂ ಹೆಚ್ಚು ಜನವಸತಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಮೇ ತಿಂಗಳ ಎರಡನೇ ವಾರದಿಂದ ಬಿಸಿಲು ಇನ್ನಷ್ಟು ತೀವ್ರವಾಗಿ ಮತ್ತಷ್ಟು ಕಡೆ ಸಮಸ್ಯೆ ಉದ್ಭವವಾಗಲಿದೆ. ಹೀಗಾಗಿ ತುರ್ತಾಗಿ ಅನುದಾನ ಕಲ್ಪಿಸಿ ಜನರ ಬವಣೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಹಲವು ದಿನಗಳಿಂದ ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ಬೀದರ್ ಜಿಲ್ಲೆಯಲ್ಲಿ ದಾಖಲಾಗುತ್ತಿದೆ. ಕಳೆದ ವಾರದಿಂದ ಗರಿಷ್ಠ ತಾಪಮಾನ ೪೫ ಡಿಗ್ರಿ ಸೆಲ್ಸಿಯಸ್ ಇರುತ್ತಿದೆ. ಮೇ ಎರಡನೇ ವಾರದಿಂದ ಉಷ್ಣಾಂಶ ಇನ್ನೂ ಹೆಚ್ಚಾಗುವ ಮುನ್ಸೂಚನೆ ಇದೆ. ತೀವ್ರ ಬಿಸಿಲಿನಿಂದಾಗಿ ಅನೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದ್ದು ಬಾವಿ, ಬೋರ್ ವೆಲ್ ಸೇರಿದಂತೆ ನೀರಿನ ಮೂಲಗಳು ಬತ್ತಿಹೋಗಿವೆ. ಹತ್ತಾರು ಹಳ್ಳಿಗಳ ಜನರು ಬಿಸಿಲಿನ ತಾಪದಲ್ಲಿ ಕೊಡ ಹಿಡಿದು ನೀರಿಗಾಗಿ ಅತ್ತಿತ್ತ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಹಣ ಒದಗಿಸಿದರೆ ಪರ್ಯಾಯ ವ್ಯವಸ್ಥೆ ಮಾಡಿ ಜನರ ನೀರಿನ ದಾಹ ನೀಗಿಸಲು ಸಾಧ್ಯವಾಗಲಿದೆ ಎಂದು ಗಮನ ಸೆಳೆದಿದ್ದಾರೆ.

ಜಿಲ್ಲೆಯಲ್ಲಿಯೇ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರ ಸಂಪೂರ್ಣ ಹಳ್ಳಿಗಳಿಂದ ಕೂಡಿದೆ. ಕ್ಷೇತ್ರದಲ್ಲೇ ೪೦ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಸಂಖ್ಯೆ ದಿನವೂ ಹೆಚ್ಚುತ್ತಿದೆ. ಎರಡು ತಿಂಗಳ ಹಿಂದೆಯೇ ನಾನು ಅಭಾವ ಪರಿಸ್ಥಿತಿ ಕುರಿತು ಕ್ಷೇತ್ರದ ಅಧಿಕಾರಿಗಳ ಜೊತೆಗೆ ಟಾಸ್ಕ್ ಫೋರ್ಸ್ ಸಭೆ ನಡೆಸಿದ್ದೇನೆ. ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಿ ಅಲ್ಲಿ ಕೈಗೊಳ್ಳಬೇಕಾದ ತುರ್ತು ಕೆಲಸಗಳ ಬಗ್ಗೆ ಸುದೀರ್ಘ ಚರ್ಚಿಸಲಾಗಿದೆ. ಆದರೆ ಈವರೆಗೂ ಸರ್ಕಾರದಿಂದ ನಯಾ ಪೈಸೆ ಅನುದಾನ ಬಂದಿಲ್ಲ. ಹೀಗಾಗಿ ಯಾವುದೇ ಕೆಲಸ ನಡೆದಿಲ್ಲ, ಜನರ ಸಮಸ್ಯೆ ನೀಗಿಲ್ಲ. ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಪ್ರತಿ ಕ್ಷೇತ್ರಕ್ಕೆ ೧ ಕೋಟಿ ರೂ. ಕೇವಲ ನೀರಿನ ಸಮಸ್ಯೆ ನಿವಾರಣೆಗಾಗಿ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.