ಬೀದರ್: ಬಸವಣ್ಣನವರ ವಚನಗಳು ಕುರುಡರು ಆನೆ ಮುಟ್ಟಿ ಅಂದಾಜಿಸಿದಂತಿವೆ ಎಂದು ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ನುಡಿದರು.
ಆರ್‍ಆರ್‍ಕೆ ಪದವಿ ಕಾಲೇಜು ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಮಾಧವನಗರದ ಆರ್‍ಆರ್‍ಕೆ ಪದವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಇಂದಿಗೂ ಅವುಗಳ ಆಳ ಅಧ್ಯಯನ, ಅರ್ಥ ವಿವರಣೆಗೆ ನಿಲುಕದಂತಿವೆ. ಅಂದು ಚಾಲನೆಯಲ್ಲಿದ್ದ ರಾಜಸತ್ತೆಯನ್ನು ಬದಿಗೊತ್ತಿ ಮೊದಲ ಬಾರಿಗೆ ಪ್ರಜಾಸತ್ತೆಯನ್ನು ಮುನ್ನೆಲೆಗೆ ತಂದರು. ಈ ಕಾರಣಕ್ಕಾಗಿಯೇ ಕೆಳ ವರ್ಗದ ಮಹಿಳೆಯರೂ ವಚನ ರಚನೆಯಲ್ಲಿ ತೊಡಗಿಸಿಕೊಳ್ಳಲು, ಆಯ್ದಕ್ಕಿ ಲಕ್ಕಮ್ಮನಂಥವರು ಅಂದೇ ಭ್ರಷ್ಟಾಚಾರದ ನಿರ್ಮೂಲನೆಗೆ ಅಂತಃಶಕ್ತಿಯನ್ನು ತಂದುಕೊಳ್ಳಲು ಸಾಧ್ಯವಾಯಿತು. ಅಂತಹ ಶಕ್ತಿ ತುಂಬಿದವರೇ ಬಸವಣ್ಣನವರು ಎಂದು ಹೇಳಿದರು.
ತನ್ನ ಸಂಬಂಧಗಳನ್ನು ತಳ ಸಮುದಾಯದವರೊಂದಿಗೆ ಅಪವರ್ಗೀಕರಣಗೊಳಿಸಿಕೊಳ್ಳುತ್ತಾರೆ. ತನ್ನ ಹುಟ್ಟನ್ನೇ ನಿರಾಕರಿಸುತ್ತ, ಕೆಳ ವರ್ಗಕ್ಕೆ ಸೇರಿಸಿಕೊಳ್ಳುವ ಶಕ್ತಿ ಅವರಲ್ಲಿತ್ತು. ತನ್ನ ಜೀವನದುದ್ದಕ್ಕೂ ಉತ್ತಮ ಮನುಷ್ಯರ ಉತ್ತಮ ಸಮಾಜದಲ್ಲಿ ಜಾತಿ,ಮತ,ವರ್ಗ,ವರ್ಣಗಳ ಭೇದಗಳಿರಬಾರದೆಂದು ನುಡಿದರು ಎಂದು ತಿಳಿಸಿದರು. ಬಸವ ಜಯಂತಿಯ ಆಚರಣೆ ಮಾಡುವುದು ಅಂದರೆ ನಮ್ಮ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರ್ಥ.ಬಸವ ಜಯಂತಿಯ ಉತ್ಸವ ಅಂದರೆ ದೀನ ದಲಿತರ, ಕಾಯಕ ಜೀವಿಗಳ, ಜನಪರ, ಜೀವಪರ ಜಗತ್ತಿನ ಉತ್ಸವವೇ ಆಗಿದೆ ಎಂದು ನುಡಿದರು.
ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, 900 ನೂರು ವರ್ಷಗಳ ಹಿಂದೆಯೇ ಬಸವಣ್ಣನವರು ಅನುಭವ ಮಂಟಪವೆಂಬ ಪಾರ್ಲಿಮೆಂಟ್ ನಮಗೆ ಕೊಟ್ಟಿದ್ದಾರೆ. ಅಲ್ಲಿ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲಾಗಿತ್ತು. ಶಿಕ್ಷಣದ ವಿಷಯದಲ್ಲಿ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರ್ಥಪೂರ್ಣವಾಗಿ ನಿಭಾಯಿಸಬೇಕೆಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್‍ಆರ್‍ಕೆ ಶಿಕ್ಷಣ ಸಮಿತಿಯ ಅಧ್ಯಕ್ಷ ಪ್ರಫುಲ್ ಪಾಂಡೆ ವಹಿಸಿದ್ದರು. ಶರಣಪ್ಪ ದೇಶಮುಖ, ಧನರಾಜ ತಾಂಡೂರೆ, ಶ್ರೀಕಾಂತ ಪಾಟೀಲ, ಮನೋಜಕುಮಾರ ಕುಲಕರ್ಣಿ, ಗುರುನಾಥ ಅಕ್ಕಣ್ಷನವರು ಮುಖ್ಯ ಅತಿಥಿಗಳಾಗಿದ್ದರು. ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಎಂ.ಮಚ್ಚೆ ಅವರು ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬಂಡಯ್ಯ ಸ್ವಾಮಿ ಸ್ವಾಗತಿಸಿದರು. ತಾಲ್ಲೂಕು ಕಸಾಪದ ಉಪಾಧ್ಯಕ್ಷ ಜಗನ್ನಾಥ ಕಮಲಾಪುರೆ ನಿರೂಪಿಸಿದರು. ಗೌರವ ಕಾರ್ಯದರ್ಶಿ ಉಮೇಶ ಜಾಬಾ ವಂದಿಸಿದರು.