ಬೀದರ್: ಹೊನ್ನಿಕೇರಿ ಪರಿಸರ ಪ್ರವಾಸೋದ್ಯಮ ಯೋಜನೆಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮವಾಗಿದೆ. ಈ ಪ್ರವಾಸೋದ್ಯಮ ಸಾರ್ವಜನಿಕರಿಗೆ ಕೈಬಿಸಿ ಕರೆಯುವಂತೆ ಅಭಿವೃದ್ಧಿ ಪಡಿಸಬೇಕು ಎಂದು ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಭಾಲ್ಕಿ ತಾಲೂಕಿನ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣ್ಮಾತಕ ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದ ಅವರು, ಈ ಭಾಗದಲ್ಲಿ ಅರಣ್ಯ ಪ್ರದೇಶದ ಜತೆಗೆ ಪ್ರವಾಸೋದ್ಯಮ ಬೆಳೆಯುವ ನಿಟ್ಟಿನಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿ, ಕೆಕೆಆರ್ಡಿಬಿಯಿಂದ 13.50 ಕೋಟಿ ರೂ. ಈ ಕಾಮಗಾರಿಗಾಗಿ ಮಂಜೂರಾಗಿದೆ ಎಂದು ತಿಳಿಸಿದರು.
ಈ ಕಾಮಗಾರಿಯಿಂದ ಸ್ಥಳೀಯರಿಗೆ ಅನೇಕ ಲಾಭ ಆಗಲಿದೆ. ಈ ಯೋಜನೆ ಅಡಿಯಲ್ಲಿ ಪ್ರವಾಸಿಗರಿಗಾಗಿ ಕಲ್ಯಾಣಿಗಳ ಅಭಿವೃದ್ಧಿ, ದೋಣಿಯಲ್ಲಿ ತರಗತಿ, ನಕ್ಷತ್ರ ವೀಕ್ಷಣೆ, ಕಾವಲು ಗೋಪುರ, ಮಾಹಿತಿ ಕೇಂದ್ರ, ಝರಿಗಳ ಪುನಶ್ಚೇತನ, ವಸತಿ ಸೇರಿ 5 ಕಿಮೀ ಸೈಕ್ಲಿಂಗ್ ವ್ಯವಸ್ಥೆ ಸಹ ಮಾಡಲಾಗುವುದು ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ, ಅಧಿಕಾರಿಗಳಾದ ರಮೇಶ ಕನಕಟ್ಟಾ, ಮಹೇಂದ್ರಕುಮಾರ ಮೋರೆ, ಪ್ರಮುಖರಾದ ವಿನಯಕುಮಾರ್ ಮಾಳಗೆ, ರಾಜಕುಮಾರ ಪಾಟೀಲ್, ಸತೀಶ ಸಿಕೇನಪುರ, ಶಂಕ್ರೆಪ್ಪ ಪಾಟೀಲ್, ವಿಜಯಕುಮಾರ ಜಾಧವ್, ಶ್ರೀಕಾಂತ ರಾಠೋಡ್, ಸಂತೋಷ ಸುತಾರ್ ಇತರರಿದ್ದರು.