ಬೀದರ್: ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಏಪ್ರಿಲ್, ಮೇ ಮತ್ತು ಜೂನ್ ತಿಂಗಳು ಕೂಲಿಕಾರರು ಕೆಲಸ ನಿರೀಕ್ಷಿಸುವ ತಿಂಗಳುಗಳಾಗಿದ್ದು, ಮೇ ತಿಂಗಳಿನಲ್ಲಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಒಂದು ಲಕ್ಷ ಜನರಿಗೆ ಕೆಲಸ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಹೇಳಿದರು.
ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳ ಜತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ರೈತರು ಸೇರಿದಂತೆ ಇತರರಿಗೆ ಬೇಸಿಗೆ ಕಾಲದಲ್ಲಿ ಬೇರೆ ಕಡೆ ಕೆಲಸ ಸಿಗುವುದಿಲ್ಲ. ಹೀಗಾಗಿ ಅಧಿಕಾರಿಗಳು ಹಳ್ಳಿಗಳ ಪ್ರತಿ ಮನೆಗೆ ಭೇಟಿ ನೀಡಿ ಕೂಲಿಕಾರರನ್ನು ಕೆಲಸಕ್ಕೆ ಆಹ್ವಾನಿಸಬೇಕು. ಪ್ರತಿ ಗುರುವಾರ ಗ್ರಾಮ ಪಂಚಾಯತಿಗಳಲ್ಲಿ ರೋಜಗಾರ ದಿನಾಚರಣೆ ಆಚರಣೆ ಮಾಡಿ ಕೂಲಿಕಾರರಿಗೆ ಅವರವರ ಗ್ರಾಮಗಳಲ್ಲಿಯೇ ಕೆಲಸ ನೀಡುವ ಮಾಹಿತಿ ನೀಡಬೇಕು. ಹೊಸ ಉದ್ಯೋಗ ಚೀಟಿಗಳನ್ನು ನೀಡಬೇಕು. ಕೂಲಿ ಕೆಲಸಕ್ಕೆ ಅರ್ಹರಿರುವ ಎಲ್ಲ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡಬೇಕು. ಮೇ ತಿಂಗಳಲ್ಲಿ ಪ್ರತಿ ಗ್ರಾಪಂನಲ್ಲಿ 1000 ಜನರಿಗೆ ಕೆಲಸ ನೀಡಬೇಕು ಎಂದರು.
ಏಪ್ರಿಲ್ ತಿಂಗಳಲ್ಲಿ ಜಿಲ್ಲಾದ್ಯಂತ 50 ಸಾವಿರ ಜನರಿಗೆ ಕೂಲಿಕೊಡಲು ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಏ.25 ರವರೆಗೆ ಜಿಲ್ಲೆಯಲ್ಲಿ 37 ಸಾವಿರ ಜನರಿಗೆ ಕೆಲಸ ನೀಡಿದ್ದು, ಈ ತಿಂಗಳ ಮುಗಿಯುವುದರೊಳಗಾಗಿ ನೀಡಿದ ಗುರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್, ಸಹಾಯಕ ನಿರ್ದೇಶಕ ಜಯಪ್ರಕಾಶ ಚವ್ಹಾಣ್, ಗ್ರಾಮೀಣ ಕುಡಿಯುವ ನೀರು ಮತ್ತು ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ರಾಮಲಿಂಗ ಬಿರಾದಾರ್, ಶಿವಾಜಿ ಡೋಣಿ, ಎಡಿಪಿಸಿ ದೀಪಕ್, ಹಣಮಂತ ಚಿದ್ರಿ, ಕೋಮಲಾ, ರಜನಿಕಾಂತ್ ಇತರರಿದ್ದರು.