ಜಿಲ್ಲೆ

ಪಂಚಾಯತ್ ರಾಜ್ ಗೆ ಪರಮಾಧಿಕಾರ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಂವಿಧಾನದ 73ನೇ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪರಮಾಧಿಕಾರ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಹೇಳಿದರು.

ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಉದ್ಘಾಟಿಸಿದ ಅವರು, ಭಾರತದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವಿಶೇಷ ಹಾಗೂ ಮಹತ್ವದ ಸ್ಥಾನವಿದೆ. ಮಹಾತ್ಮ ಗಾಂ ಆಶಯದಂತೆ ಗ್ರಾಮ ಸ್ವರಾಜ್ ನಿರ್ಮಾಣವಾಗಬೇಕಾದರೆ ಗ್ರಾಮಗಳು ಸರ್ವಾಂಗೀಣ ಅಭಿವೃದ್ಧಿ ಹೊಂದುವುದು ಮುಖ್ಯ ಎಂದರು.

ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಬಲತುಂಬಿದ್ದು, 73ನೇ ತಿದ್ದುಪಡಿಯಂತೆ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಗ್ರಾಮ ಪಂಚಾಯಿತಿಗಳು ತಳಮಟ್ಟದ ಗ್ರಾಮರಾಜ್ ಸಂಸ್ಥೆಗಳಾಗಿದ್ದರೆ, ತಾಲೂಕು ಪಂಚಾಯಿತಿಗಳು ಗ್ರಾಪಂನೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಪಂಚಾಯಿತಿ ತಾಪಂ, ಗ್ರಾಪಂಗಳಿಗೆ ಅಗತ್ಯ ಮಾರ್ಗದರ್ಶನ, ನಿರ್ದೇಶನ ಮಾಡುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಗ್ರಾಪಂ ಮಹತ್ವದ ಪಾತ್ರ ವಹಿಸುವ ಸ್ಥಳೀಯ ಸಕರ್ಾರವಾಗಿದ್ದು, ಗ್ರಾಮ ಸಭೆಗೆ ಸಾಂವಿಧಾನಿಕ ಮಾನ್ಯತೆ ಇದೆ. ಗ್ರಾಮ ಸಭೆ ಹಳ್ಳಿಯ ಸಂಸತ್ತು ಇದ್ದಂತೆ. ಗ್ರಾಪಂನ ಎಲ್ಲ ಕಾರ್ಯಕ್ರಮ ಮತ್ತು ಅಭಿವೃದ್ಧಿ ಯೋಜನೆಗಳು ಗ್ರಾಮ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯುವುದರಿಂದ ಗ್ರಾಮದ ಧ್ವನಿ ಅಲ್ಲಿ ಕೇಳುತ್ತದೆ. ಗ್ರಾಮೀಣ ಜನರ ಆಶೋತ್ತರಗಳು ಗ್ರಾಮಸಭೆ ಮೂಲಕ ಅಭಿವ್ಯಕ್ತಿಗೊಂಡು ಯೋಜನೆಯ ರೂಪ ತಾಳುತ್ತವೆ. ಇಂಥ ಮಹತ್ವದ ಪಾತ್ರ ವಹಿಸುವ ಗ್ರಾಮಸಭೆ ಮತ್ತು ಗ್ರಾಪಂಗಳನ್ನು ಚುನಾಯಿತ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿ ಬಲಬಡಿಸಬೇಕಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪಂಚಾಯತ್ ರಾಜ್ ವ್ಯವಸ್ಥೆಯೆಂಬ ರಥದ ಎರಡು ಚಕ್ರಗಳಿದ್ದಂತೆ. ಅವರಿಬ್ಬರು ಪರಸ್ಪರ ಪೂರಕವಾಗಿ ನಡೆಯಬೇಕು ಎಂದರು.

ಬೀದರ್ ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಂಡವು ಉತ್ತಮ ಕಾರ್ಯನಿರ್ವಹಣೆ ಮೂಲಕ ನರೇಗಾ, ವಸತಿ, ಎಸ್ಬಿಎಂ ಮತ್ತು ತೆರಿಗೆ ವಸೂಲಿಯಲ್ಲಿ ರಾಜ್ಯದ ಅಗ್ರ ಜಿಲ್ಲೆಗಳಲ್ಲಿ ಒಂದಾಗಿದ್ದು, ಐದನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮ ಸಭೆ, ವಾಡ್೯ ಸಭೆಗಳ ಮಹತ್ವ ಕುರಿತು ಪಿಡಿಒ ಸ್ವರೂಪಾರಾಣಿ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಬೆಳೆದು ಬಂದ ಬಗೆಯನ್ನು ಜಿಪಂ ಯೋಜನಾಶಾಖೆ ಸಹಾಯಕ ಸಾಂಖಿಕ ಅಧಿಕಾರಿ ರತಿಕಾಂತ ವಿವರಿಸಿದರು.

ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ಪಿಆರ್.ಇ ಮತ್ತು ಗ್ರಾಮೀಣ ಕುಡಿಯುವ ನೀರು ಯೋಜನೆ ಕಾರ್ಯಪಾಲಕ ಅಭಿಯಂತರರಾದ ಶಿವಾಜಿ ಡೋಣಿ, ರಾಮಲಿಂಗ ಬಿರಾದಾರ್, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್, ಸಹಾಯಕ ನಿರ್ದೇಶಕ ಜಯಪ್ರಕಾಶ ಚವ್ಹಾಣ್ ಇತರರಿದ್ದರು. ಅಭಿವೃದ್ಧಿ ಶಾಖೆ ಅಧೀಕ್ಷಕ ಮಹ್ಮದ್ ಬಶೀರ್ ಸ್ವಾಗತಿಸಿ ನಿರೂಪಣೆ ಮಾಡಿದರು.