ಬೀದರ್: ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಕಾಮಗಾರಿಗಳ ಟೆಂಡರ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇದ್ದು, ಶಾಸಕರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಮುಖಂಡ ದೀಪಕ ಪಾಟೀಲ ಚಾಂದೋರಿ ಸವಾಲು ಹಾಕಿದ್ದಾರೆ.
ಕ್ಷೇತ್ರದ ದಾಬಕಾ(ಸಿ)ದಿಂದ ಚಿಕ್ಲಿ(ಯು) ಬಾರ್ಡರ್ ವರೆಗೆ ರಸ್ತೆ ನಿರ್ಮಾಣಕ್ಕೆ ಕೆಕೆಆರ್‍ಡಿಬಿ ಹಾಗೂ ಎಸ್‍ಎಸ್‍ಡಿಪಿ ಅಡಿಯಲ್ಲಿ 10 ಕೋಟಿ ರೂ. ಮಂಜೂರಾಗಿದೆ. ಕಾಮಗಾರಿಗೆ ಟೆಂಡರ್ ಸಲ್ಲಿಸಲು ಮಾರ್ಚ್ 27 ಕೊನೆಯ ದಿನವಾಗಿತ್ತು. ಆದರೆ, ಮಾರ್ಚ್ 31ಕ್ಕೆ ರಸ್ತೆ ಪೂರ್ಣಗೊಂಡಿದೆ ಎಂದು ಆರೋಪ ಮಾಡಿದ್ದಾರೆ.
ಟೆಂಡರ್ ಕೊನೆಯ ದಿನಾಂಕದ ನಂತರ ಟೆಂಡರ್ ಅಂತಿಮಗೊಳಿಸಿ, ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ತಿಂಗಳ ಸಮಯ ಬೇಕಾಗುತ್ತದೆ. ನಾಲ್ಕೇ ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಟೆಂಡರ್ ಅಂತಿಮವಾಗುವ ಮೊದಲೇ ಆರಂಭಿಸಲಾದ ಈ ರಸ್ತೆ ಕಾಮಗಾರಿ ಸ್ಥಳಕ್ಕೆ ಫೆಬ್ರುವರಿ 16 ರಂದು ಶಾಸಕ ಪ್ರಭು ಚವ್ಹಾಣ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆ ದಿನ ಅದನ್ನು ಫೇಸ್‍ಬುಕ್‍ನಲ್ಲಿಯೂ ಅಪ್‍ಲೋಡ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಿಂದ ದುಡಕನಾಳ ಹತ್ತಿರ ಬ್ಯಾರೇಜ್ ನಿರ್ಮಾಣಕ್ಕೆ 2 ಕೋಟಿ ರೂ. ಮಂಜೂರಾಗಿದೆ. ಏಪ್ರಿಲ್ 24ಕ್ಕೆ ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಆದರೆ, ಇಲ್ಲಿ ಈಗಾಗಲೇ ಅರ್ಧದಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಟೆಂಡರ್‍ಗೆ ಮುಂಚಿತವಾಗಿ ಮಾರ್ಚ್ 30ಕ್ಕೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಈ ಎರಡು ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಆರಂಭಿಸಿದ್ದಕ್ಕೆ ಉದಾಹರಣೆಗಳು. ಇಂತಹ ಅನೇಕ ಕಾಮಗಾರಿಗಳಿವೆ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತ ಕಾಪಾಡುವ ಭರವಸೆಯಿಂದ ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಕ್ಷೇತ್ರದ ಪರಿಸ್ಥಿತಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಹೇಳಿದ್ದಾರೆ.
ಶಾಸಕರಿಗೆ ಪ್ರಶ್ನೆ ಮಾಡಿದರೆ ತಮ್ಮ ಬಾಲ ಬುಡುಕರಿಂದ ಪ್ರತಿ ಹೇಳಿಕೆ ಕೊಡಿಸುತ್ತಿದ್ದಾರೆ. ಹೇಳಿಕೆ ಕೊಟ್ಟವರು ಯಾರು, ಏನು ಎಂಬುದು ಎಲ್ಲರಿಗೆ ತಿಳಿದಿದೆ. ಶಾಸಕರ ಮುಂದೆ ಮತ್ತು ಹಿಂದೆ ಅವರು ಏನು ಹೇಳುತ್ತಾರೆಂದು ಗೊತ್ತಿದೆ ಎಂದು ಹೇಳಿದ್ದಾರೆ.