ಬೀದರ್: ಬೀರಲಿಂಗೇಶ್ವರ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ. 15 ಲಕ್ಷ ಅನುದಾನ ಒದಗಿಸಲಾಗುವುದು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭರವಸೆ ನೀಡಿದರು.
ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ದೇವಸ್ಥಾನ ಕಳಸಾರೋಹಣ, ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ನೂತನ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೊಂಡ(ಕುರುಬ) ಸಮುದಾಯದ ವಿವಿಧ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ತಿಂಥಣಿ ಬ್ರಿಡ್ಜ್‍ನ ಕನಕ ಗುರು ಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಗೊಂಡ(ಕುರುಬ) ಸಮಾಜದವರು ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದನ್ನು ಬಿಡಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಹಾಗೂ ಶಿಕ್ಷಣ ಕೊಡಬೇಕು. ಸನ್ಮಾರ್ಗದಲ್ಲಿ ಸಾಗಬೇಕು. ಸಮಾಜದ ಅಭಿವೃದ್ಧಿಗೂ ನೆರವಾಗಬೇಕು ಎಂದು ಹೇಳಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯರಿಗೆ ಮಹತ್ವದ ಇತಿಹಾಸ ಇದೆ ಎಂದು ತಿಳಿಸಿದರು.
ಉಚ್ಚಾದ ಬಾಲ ತಪಸ್ವಿ ಗೋಪಾಲ್ ಮುತ್ತ್ಯಾ, ಹುಲಿಜಂತಿಯ ಮಾಳಿಂಗರಾಯ ಮಹಾರಾಜ ಸಮ್ಮುಖ ವಹಿಸಿದ್ದರು. ಸಂಸದ ಸಾಗರ್ ಖಂಡ್ರೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬು ಮಲ್ಕಾಪುರ, ಪ್ರಮುಖರಾದ ಮನ್ನಾನ್ ಸೇಠ್, ಬಸವರಾಜ ಮಾಳಗೆ, ಶ್ರೀಕಾಂತ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಎಸ್, ಪ್ರಮುಖರಾದ ತುಳಸಿರಾಮ ಉಚ್ಚಾ, ಅಮರ ವಡಗಾವೆ, ಮಹೇಶ ಸೋಲಪುರೆ, ಬಾಲಾಜಿ, ಬಂಡೆಪ್ಪ ಮಲಸೆ, ರಾಜಕುಮಾರ ಡೋರ್, ಓಂಕಾರ ನಾಗನ್ನೋರ್ ಮತ್ತಿತರರು ಉಪಸ್ಥಿತರಿದ್ದರು.
ಕಲಬುರಗಿ, ಬೀದರ್, ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಸ್ವಾಗತಿಸಿದರು.
ಗ್ರಾಮಕ್ಕೆ ಬಂದ ತಿಂಥಿ ಬ್ರಿಡ್ಜ್ ಕನಕ ಗುರು ಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಅವರನ್ನು ಸ್ವಾಗತಿಸಿ, ಮೆರವಣಿಗೆಯಲ್ಲಿ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಕರೆ ತರಲಾಯಿತು. ಕುಂಭ ಕಳಸ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಭಜನೆ ಮತ್ತಿತರ ಕಲಾ ತಂಡಗಳು ಮೆರವಣಿಗೆಗೆ ಕಳೆ ನೀಡಿದವು.