ಬೀದರ್: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕ ಆಯುರ್ವೇದ ಅಧ್ಯಯನ ಮಂಡಳಿ ಸದಸ್ಯರಾಗಿ ನಗರದ ಡಾ. ಶಿವಶರಣಯ್ಯ ಮಠಪತಿ ಅವರನ್ನು ನೇಮಕ ಮಾಡಲಾಗಿದೆ.
ವಿಶ್ವವಿದ್ಯಾಲಯದ ಕುಲಸಚಿವ ಪಲ್ಲಕ್ಕಿ ರಾಮಣ್ಣ ಶಿವಪ್ರಸಾದ್ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇವರ ಅಧಿಕಾರ ಅವಧಿ 2027 ರ ಜೂನ್ 15 ರ ವರೆಗೆ ಇರಲಿದೆ.
ಮಠಪತಿ ಅವರು ಬಸವಕಲ್ಯಾಣದ ನೀಲಗಂಗಾ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಶರೀರ ರಚನೆ ವಿಭಾಗದ ಮುಖ್ಯಸ್ಥರಾಗಿದ್ದಾರೆ. ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ಕೃತಿ ರಚಿಸಿದ್ದಾರೆ. ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
ಮಠಪತಿ ಅವರ ನೇಮಕಕ್ಕೆ ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು, ನೀಲಗಂಗಾ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಆಡಳಿತ ಮಂಡಳಿ ಪದಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.