ಬೀದರ್: ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಗೆ ಒಲವು ಇರುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೈದರಾಬಾದ್‍ನ ಪ್ರೇರಕ ಭಾಷಣಕಾರ ಪಿ. ರಂಗಾರೆಡ್ಡಿ ಹೇಳಿದರು.
ನಗರದ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಹಾಗೂ ಸಮಾಲೋಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‍ಗೆ ಸೀಮಿತರಾಗಬಾರದು. ಎಲ್ಲ ಕ್ಷೇತ್ರಗಳಲ್ಲೂ ಪಸರಿಸಬೇಕು. ಯು.ಪಿ.ಎಸ್.ಸಿ. ಹಾಗೂ ಕೆ.ಪಿ.ಎಸ್.ಸಿ. ಪರೀಕ್ಷೆಗಳಲ್ಲೂ ಯಶ ಗಳಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಯಶಸ್ಸು ಹಾಗೂ ಪರಿಶ್ರಮ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಪ್ರಯತ್ನಪಟ್ಟರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ಚಿಂತಕ ವೆಂಕಟ ವಾವಿಲಾಲ್ ಮಾತನಾಡಿ, ಕೌಶಲ ಇದ್ದವರಿಗೆ ಅವಕಾಶಗಳ ಕೊರತೆ ಇಲ್ಲ ಎಂದು ತಿಳಿಸಿದರು.
ವೃತ್ತಿ ಮಾರ್ಗದರ್ಶನ ಹಾಗೂ ಸಮಾಲೋಚನೆ ವಿದ್ಯಾರ್ಥಿಗಳಿಗೆ ಅತ್ಯಗತ್ಯ ಅಂಶಗಳಾಗಿವೆ. ವಿದ್ಯಾರ್ಥಿಗಳು ವೃತ್ತಿ ಅರಿವು, ಕೌಶಲ ಹಾಗೂ ಸಮಯ ಪ್ರಜ್ಞೆ ಹೊಂದಿರಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಪಿ. ವಿಠ್ಠಲರೆಡ್ಡಿ ಹೇಳಿದರು.
ಹೈದರಾಬಾದ್‍ನ ಎಸ್.ಎನ್. ಕಮ್ಯುನಿಕೇಷನ್ಸ್ ಮುಖ್ಯಸ್ಥ ಶಂಕರ ಜಾಧವ್, ಉಪ ಪ್ರಾಚಾರ್ಯ ಅನಿಲಕುಮಾರ ಆಣದೂರೆ ಮಾತನಾಡಿದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪೂಜಾ. ಎಂ. ಸ್ವಾಗತಿಸಿದರು. ನಾಗರಾಣಿ ಪಾಲಂ ನಿರೂಪಿಸಿದರು. ಪ್ರಿಯದರ್ಶಿನಿ ವಂದಿಸಿದರು.
ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಹೈದರಾಬಾದ್‍ನ ಧ್ರುವ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.