ಬೀದರ್: ಕಾಡವಾದದ ಜೀವನ ಪ್ರಕಾಶ ಕಲ್ಚರಲ್ ಆ್ಯಂಡ್ ವೆಲ್‍ಫೇರ್ ಸೊಸೈಟಿ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಈಚೆಗೆ ಆಯೋಜಿಸಿದ್ದ ವಿಶೇಷಚೇತನ ಕಲಾವಿದರ ಕಲಾ ಪ್ರತಿಭೋತ್ಸವವು ವಿಶೇಷಚೇತನರ ಕಲಾ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಯಿತು.
ವಿಶೇಷಚೇತನರು, ಸುಗಮ ಸಂಗೀತ, ತಬಲಾ, ಡ್ರಮ್ ವಾದನ, ಜನಪದ ಗಾಯನ, ಮಿಮಿಕ್ರಿ ಮೊದಲಾದ ಕಲೆಗಳ ಪ್ರದರ್ಶನದ ಮೂಲಕ ನೆರೆದವರ ಮನಸೂರೆಗೊಂಡರು.
ಉತ್ತರಕನ್ನಡ ಜಿಲ್ಲೆಯ ಆಕಾಶವಾಣಿ ಕಲಾವಿದೆ ಸ್ವಪ್ನಾ ನಾಯಕ್ ಸುಗಮ ಸಂಗೀತ ನಡೆಸಿಕೊಟ್ಟರೆ, ಬೆಳಗಾವಿಯ ಬಸಮ್ಮ ಮಠದ ಜಾನಪದ ಗೀತೆಗಳನ್ನು ಸುಮಧುರವಾಗಿ ಹಾಡಿದರು. ಬಳ್ಳಾರಿಯ ಬಲ್ಲೂರಪ್ಪ ಬಾಯಿಯಿಂದಲೇ ತಬಲಾ, ಡ್ರಮ್ ವಾದಿಸಿ ಗಮನ ಸೆಳೆದರು. ಕೊಪ್ಪಳ ಜಿಲ್ಲೆಯ ಚಂಪಕಮಾಲ ಅವರ ಮಿಮಿಕ್ರಿ ಸಭಿಕರನ್ನು ನಕ್ಕು ನಲಿಸಿತು. ಇನ್ನೂ ಅನೇಕ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಕವಿಗೋಷ್ಠಿಯಲ್ಲಿ ವಿಶೇಷಚೇತನರು ಸ್ವರಚಿತ ಕವನ ವಾಚಿಸಿದರು. ಸಂಸ್ಥೆಯ ಅಧ್ಯಕ್ಷ ದಿಲೀಪ್ ಕಾಡವಾದ ಸಂಪಾದಕತ್ವದ ‘ಪ್ರತಿಭಾ ಕಾವ್ಯಾಂಜಲಿ’ ಕೃತಿ, ವಿಶೇಷಚೇತನ ಕಲಾವಿದರ ಗಾಯನದ ‘ಭಾವ ಸುನಾದ’ ಧ್ವನಿ ಸುರಳಿ ಬಿಡುಗಡೆ ಮಾಡಲಾಯಿತು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಪೂರ್ಣಿಮಾ ಜಾರ್ಜ್ ಉದ್ಘಾಟಿಸಿದರು. ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಉಪನ್ಯಾಸಕ ರಾಮಚಂದ್ರ ಗಣಾಪುರ, ಸಂಸ್ಥೆಯ ಕಾರ್ಯದರ್ಶಿ ಎಸ್ತೇರ್ ಡಿ. ಕಾಡವಾದ್ ಮಾತನಾಡಿದರು. ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ದಿಲೀಪ್ ಕಾಡವಾದ ಅಧ್ಯಕ್ಷತೆ ವಹಿಸಿದ್ದರು.
ಖ್ಯಾತ ಗಾಯಕಿ ರೇಖಾ ಸೌದಿ, ಪ್ರಮುಖರಾದ ಸಂಜೀವಕುಮಾರ ಅತಿವಾಳೆ, ಮಹಾದೇವ ಮೊಂಗಳೆ, ಡಾ. ವಿವೇಕ್ ನಿಂಬೂರೆ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಎಂ.ಎಸ್. ಮನೋಹರ, ಪಾರ್ವತಿ ಸೋನಾರೆ, ಡಾ. ಪೌರ್ಣಿಮ ಶೇಳ್ಕೆ, ಡಾ. ರಾಜಕುಮಾರ ಹೆಬ್ಬಾಳೆ, ಪುಂಡಲೀಕರಾವ್ ಪಾಟೀಲ್, ರಾಜೇಂದ್ರಸಿಂಗ್ ಪವಾರ್, ತಾಜೊದ್ದಿನ್ ಮರ್ಜಾಪುರ, ಮಹೇಶಕುಮಾರ ಕುಂಬಾರ, ಸ್ವಾಮಿದಾಸ ನಾಗೂರೆ, ರಮೇಶ ಭುಸ್ಸಾ, ರಾಜೇಂದ್ರ ಮಣಗಿರೆ, ಸಂಗ್ರಾಮ ಎಂಗಳೆ, ಸುನೀಲ್ ಚಾಂಬೋಳ್, ಮಂಗಲಾ ಮರಕಲೆ ಇದ್ದರು.
ಜೆಸ್ಸಿ ಸೋನವಾನೆ ಸ್ವಾಗತಿಸಿದರು. ದೇವಿದಾಸ ಜೋಶಿ, ದಿಲೀಪ್ ಮೋಘಾ ನಿರೂಪಿಸಿದರು. ಸೈಮನ್ ಸೂರ್ಯವಂಶಿ ವಂದಿಸಿದರು.