ಬೀದರ್: ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವವನ್ನು ನಗರದಲ್ಲಿ ಮಾರ್ಚ್ 12 ರಂದು ಅದ್ಧೂರಿಯಾಗಿ ಆಚರಿಸಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಆಚರಣೆ ಸಮಿತಿ ನಿರ್ಧರಿಸಿವೆ.
ನಗರದ ಪಾಪನಾಶ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ಕುರಿತು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.
ರೇಣುಕಾಚಾರ್ಯರು ಮಾನವ ಕಲ್ಯಾಣಕ್ಕೆ ಶ್ರಮಿಸಿದ್ದರು. ಜನರಿಗೆ ಮುಕ್ತಿಯ ಮಾರ್ಗ ತೋರಿದ್ದರು. ಜಿಲ್ಲಾಡಳಿತದೊಂದಿಗೆ ಸರ್ವ ಸಮಾಜದವರು ಸೇರಿ ಅವರ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಹೇಳಿದರು.
ಬೀದರ್ ಧರ್ಮ ಸಮನ್ವಯತೆಗೆ ಹೆಸರಾಗಿದೆ. ಈವರೆಗೆ ಒಗ್ಗೂಡಿ ಮಹಾತ್ಮರ ಜಯಂತಿಗಳನ್ನು ಆಚರಿಸುತ್ತಾ ರಾಜ್ಯಕ್ಕೆ ಉತ್ತಮ ಸಂದೇಶ ನೀಡಿದೆ ಎಂದು ತಿಳಿಸಿದರು.
ಜಯಂತ್ಯುತ್ಸವದ ಯಶಸ್ವಿಗೆ ಸ್ವಾಗತ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಿ, ಸರ್ವ ಸಮಾಜದವರು ಹಾಗೂ ಜಿಲ್ಲಾ ಆಡಳಿತ ಸಿದ್ಧತಾ ಕಾರ್ಯಗಳಲ್ಲಿ ತೊಡಗಬೇಕಾಗಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಆಚರಣೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಹೇಳಿದರು.
ಮಾ. 12 ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಮುಖ ಬೀದಿಗಳ ಮೂಲಕ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದ ವರೆಗೆ ಅಲಂಕೃತ ರಥದಲ್ಲಿ ರೇಣುಕಾಚಾರ್ಯರ ಭಾವಚಿತ್ರದ ವೈಭವಯುತ ಮೆರವಣಿಗೆ ನಡೆಯಲಿದೆ. ಬಳಿಕ ವೇದಿಕೆ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಜಯಂತ್ಯುತ್ಸವ ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹೇಳಿದರು.
ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಯಂತ್ಯುತ್ಸವ ಆಚರಣೆ ಸಮಿತಿಯ ಖಜಾಂಚಿ ರವೀಂದ್ರ ಸ್ವಾಮಿ ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ, ಡಾ. ಬಂಡಯ್ಯ ಸ್ವಾಮಿ, ಮುಖಂಡರಾದ ಗಂಗಾಧರ ಸ್ವಾಮಿ, ಮಹೇಶ ಪಾಟೀಲ, ವರದಯ್ಯ ಸ್ವಾಮಿ, ರಾಜಕುಮಾರ ಸ್ವಾಮಿ ಬಂಪಳ್ಳಿ, ಮಹಾಂತಯ್ಯ ಸ್ವಾಮಿ, ರೇವಣಸಿದ್ದಯ್ಯ ಸ್ವಾಮಿ, ಶಿವಕುಮಾರ ಹಿರೇಮಠ, ಪ್ರವೀಣ್ ಸ್ವಾಮಿ, ನಾಗಯ್ಯ ಸ್ವಾಮಿ, ಶಿವಶಂಕರ ಬೆಳಮಗಿ, ಸಂಜು ಸ್ವಾಮಿ ಇದ್ದರು.
ವಿವಿಧ ಸಮಾಜಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.