ಜಿಲ್ಲೆ

ಹಂಪಿ ಉತ್ಸವದಲ್ಲಿ ಬೀದರ್‍ನ ರೇಖಾ ಸೌದಿ ಗಾನ ಲಹರಿ

ರೇವಣಸಿದ್ದಪ್ಪ ಪಾಟೀಲ್

ಬೀದರ್‍: ಖ್ಯಾತ ಗಾಯಕಿ ರೇಖಾ ಸೌದಿ ಅವರು ವಿಶ್ವ ವಿಖ್ಯಾತ ಹಂಪಿ ಉತ್ಸವದ ಎದುರು ಬಸವಣ್ಣ ವೇದಿಕೆಯಲ್ಲಿ ಸಂಗೀತದ ರಸದೌತಣ ಉಣಬಡಿಸಿದರು.

‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ...’, ‘ಸೋಜುಗದ ಸೂಜು ಮಲ್ಲಿಗೆ ಮಾದೇವ ನಿನ್ನ ಮಂಡೆ ಮ್ಯಾಲೆ ದುಂಡು ಮಲ್ಲಿಗೆ...’, ಪುನೀತ್ ರಾಜಕುಮಾರ ಅವರ ‘ಬೊಂಬೆ ಹೇಳುತೈತೆ..’ ಜೊತೆಗೆ ‘ಅಭಿಮಾನಿಗಳೇ ನಮ್ಮನೆ ದೇವ್ರು...’ ಹಾಡುಗಳ ಮೂಲಕ ಸಂಗೀತಪ್ರಿಯರ ಮನ ಗೆದ್ದರು. ಕೀ ಬೋರ್ಡ್‍ಗೆ ಶಿವಾನಂದ ಭಜಂತ್ರಿ ವಿಜಯಪುರ, ತಬಲಾ ರಮೇಶ ರತ್ಮಾಕರ್ ಹಾಗೂ ಪ್ಯಾಡ್‍ಗೆ ಸುರೇಶ ಬಳ್ಳಾರಿ ಸಾಥ್ ನೀಡಿದರು.

ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷರಾಗಿ ಹಲವಾರು ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ಬೀದರ್‍ನ ಹೆಮ್ಮೆಯ ಗಾಯಕಿ ಎನಿಸಿಕೊಂಡಿರುವ ರೇಖಾ ಸೌದಿ ಈಗಾಗಲೇ ಹಲವು ಬಾರಿ ಹಂಪಿ ಉತ್ಸವದ ಮುಖ್ಯ ವೇದಿಕೆಗಳಲ್ಲಿಯೂ ಸಂಗೀತ ಸೇವೆ ಸಲ್ಲಿಸಿದ್ದಾರೆ. ರೇಖಾ ಸೌದಿ, ವಿಶ್ವ ವಿಖ್ಯಾತ ಮೈಸೂರು ದಸರಾ, ಮೈಸೂರು ಯುವ ದಸರಾ, ಕಲಬುರಗಿಯ ರಾಷ್ಟ್ರಕೂಟ ಉತ್ಸವ, ರಾಜ್ಯಮಟ್ಟದ ಬಸವ ಉತ್ಸವ, ಬೀದರ್ ಉತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ವಿಶೇಷ.

ಹಂಪಿ ಉತ್ಸವದ ಎದುರು ಬಸವಣ್ಣ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಅವರು ಹಂಪಿ ಉತ್ಸವ ವಿಶ್ವ ವಿಖ್ಯಾತ ಕಲಾವಿದರ ಸಂಗಮಕ್ಕೆ ಸಾಕ್ಷಿಯಾಗಿದೆ. ಎದುರು ಬಸವಣ್ಣ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವ ಕಲಾವಿದರು ಸುದೈವಿಗಳು ಎಂದು ಬಣ್ಣಿಸಿದರು.

ವೇದಿಕೆಯ ರಾಯಭಾರಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಸಂಗಯ್ಯ ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಕಿಕೇರಿ ಮಲ್ಲಿಕಾರ್ಜುನ, ಸಹಾಯಕ ಆಯುಕ್ತ ಚಿದಾನಂದ ಗೋಸ್ವಾಮಿ ಇದ್ದರು. ನಿರೂಪಕರಾಗಿ ವಿನೋದ ಹಾಗೂ ಭುವನೇಶ್ವರಿ ಕಾರ್ಯ ನಿರ್ವಹಿಸಿದರು.