ಜಿಲ್ಲೆ

ಗೌರಶೆಟ್ಟಿ ಕಾಲೇಜು: ರೇಖಾಚಿತ್ರ ರಂಗೋಲಿ ಜಾತ್ರೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಅರ್ಥಶಾಸ್ತ್ರ ರೇಖಾಚಿತ್ರಗಳ ರಂಗೋಲಿ ಜಾತ್ರೆ ನಡೆಯಿತು.

ದ್ವಿತೀಯ ಪಿಯುಸಿಯ 12 ತಂಡಗಳ 90 ವಿದ್ಯಾರ್ಥಿಗಳು ಪಠ್ಯ ಆಧಾರಿತ ರೇಖಾಚಿತ್ರಗಳ ರಂಗೋಲಿ ಬಿಡಿಸಿ ಗಮನ ಸೆಳೆದರು.

ಅರ್ಥಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಲು ರೇಖಾ ಚಿತ್ರಗಳ ರಂಗೋಲಿ ಸಹಕಾರಿಯಾಗಿದೆ ಎಂದು ಜಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಆರ್.ವಿ. ಗಂಗಶೆಟ್ಟಿ ಹೇಳಿದರು.

ವಿದ್ಯಾರ್ಥಿಗಳು ಆತ್ಮವಿಶ್ವಾಸ ಹಾಗೂ ಛಲ ಬೆಳೆಸಿಕೊಳ್ಳಬೇಕು. ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ತನ್ನೊಂದಿಗೆ ತಾನೇ ಸ್ಪರ್ಧೆ ನಡೆಸಬೇಕು ಎಂದು ಸಲಹೆ ಮಾಡಿದರು.

ಜಾತ್ರೆಯಲ್ಲಿ ಬಿಡಿಸಿದ ರಂಗೋಲಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ ವೈಯಕ್ತಿಕವಾಗಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಸಿದ್ಧಾರೂಢ ಪದವಿ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿದರು.

ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ, ಅರ್ಥಶಾಸ್ತ್ರ ಉಪನ್ಯಾಸಕ ಸೂರ್ಯಕಾಂತ ಐನಾಪುರ, ಲಕ್ಷ್ಮಣ ಎಂ. ಪೂಜಾರಿ, ರಾಜಶೇಖರ ಮಂಗಲಗಿ, ಬಸಪ್ಪ ಹೆಗ್ಗೆ, ವೀರಣ್ಣ ಕೆ., ಗೌತಮ ಭೋಸ್ಲೆ, ರಾಧಾ ಬಿ. ಇದ್ದರು.