ಬೀದರ್: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಇದ್ದವರಿಗೆ ವಿಪುಲ ಉದ್ಯೋಗ ಅವಕಾಶಗಳು ಇವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ನುಡಿದರು.
ವಚನ ವಿಜಯೋತ್ಸವ ಅಂಗವಾಗಿ ಬಸವ ಕಾಯಕ, ದಾಸೋಹ ಫೌಂಡೇಷನ್ ವತಿಯಿಂದ ಇಲ್ಲಿಯ ಕೆ.ಇ.ಬಿ. ಕಚೇರಿ ರಸ್ತೆಯಲ್ಲಿ ಇರುವ ಐ.ಎಂ.ಎ. ಹಾಲ್‍ನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕೌಶಲ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ ಭಾರತ. ಕೌಶಲಕ್ಕೆ ಬಹು ಬೇಡಿಕೆ ಇರುವ ಕಾರಣ ಯುವಕರು ಏನಾದರೂ ಕೌಶಲ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಯುವ ಜನರಲ್ಲಿ ಕೌಶಲ ಬೆಳೆಸುವ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಜಿಲ್ಲೆಯ ಯುವಕರಿಗೆ ನೆರವಾಗಲು ಬಸವ ಕಾಯಕ, ದಾಸೋಹ ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು ಕಾರ್ಯಾಗಾರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕೆ ಅಕ್ಕ ಮಾತನಾಡಿ, ವಚನ ವಿಜಯೋತ್ಸವ ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ಬಸವರಾಜ ಧನ್ನೂರ ಅವರು ಕಾರ್ಯಾಗಾರ ಸಂಘಟಿಸಿದ್ದಾರೆ. ಬಸವ ಸೇವಾ ಪ್ರತಿಷ್ಠಾನ ಹಾಗೂ ವಚನ ವಿಜಯೋತ್ಸವಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಯುವಕರು ಕೌಶಲಕ್ಕೆ ಆದ್ಯತೆ ಕೊಡಬೇಕು. ಉತ್ತಮ ಜೀವನ ರೂಪಿಸಿಕೊಳ್ಳಲು ವಚನ ಸಾಹಿತ್ಯದ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಹೊಂದುವುದು ಬಹಳ ಅವಶ್ಯಕವಾಗಿದೆ. ಹೀಗಾಗಿ ಜಿಲ್ಲೆಯ ಯುವಜನರಿಗೆ ಕೌಶಲದ ಮಹತ್ವ ಮನವರಿಕೆ ಮಾಡಿಕೊಡಲು ಹಾಗೂ ಅವರಲ್ಲಿ ಕೌಶಲ ಬೆಳೆಸಲು ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಸವ ಕಾಯಕ, ದಾಸೋಹ ಫೌಂಡೇಷನ್ ಎಂಟು ವರ್ಷಗಳಿಂದ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಿಸಿದೆ. ಬಡ ಮಕ್ಕಳ ಶಿಕ್ಷಣ, ಬಡ ಹೆಣ್ಣುಮಕ್ಕಳ ಮದುವೆ, ಪುಸ್ತಕ ಪ್ರಕಟಣೆಗೆ ನೆರವಾಗಿದೆ. ಸಾಧಕರಿಗೆ ಪ್ರೇರಣೆ ನೀಡುವ ಅನೇಕ ಪ್ರಶಸ್ತಿಗಳ ಮೊತ್ತ ಭರಿಸಿದೆ. ಮುಂದಿನ ದಿನಗಳಲ್ಲಿಯೂ ಫೌಂಡೇಷನ್ ತನ್ನ ಸೇವಾ ಕಾರ್ಯಗಳನ್ನು ಮುಂದುವರಿಸಲಿದೆ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಹಾಗೂ ಡಿ.ವಿ. ಸನ್ ಟ್ರೈನಿಂಗ್ ಡಿವಿಸನ್ ಸಿಇಒ ಶಿವಾನಂದ ಡಿ.ವಿ. ಅವರನ್ನು ಸನ್ಮಾನಿಸಲಾಯಿತು.
ಎಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ, ಕೆ.ಆರ್.ಇ. ಸಂಸ್ಥೆಯ ಕಾರ್ಯದರ್ಶಿ ಸತೀಶ್ ಪಾಟೀಲ, ಐ.ಎಂ.ಎ. ಬೀದರ್ ಘಟಕದ ಅಧ್ಯಕ್ಷ ಡಾ. ವಿಜಯ ಕೋಟೆ, ಜಿ.ಎನ್.ಡಿ. ಎಂಜಿನಿಯರಿಂಗ್ ಕಾಲೇಜು ನಿರ್ದೇಶಕ ಸರ್ದಾರ್ ಪುನೀತ್‍ಸಿಂಗ್, ವಚನ ವಿಜಯೋತ್ಸವದ ಕಾರ್ಯಾಧ್ಯಕ್ಷ ವಿಶ್ವನಾಥ ಕಾಜಿ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಹೈ ಐಡಿಯಲ್ಸ್ ಟೆಕ್ನಾಲಜೀಸ್ ಸಿಇಒ ಸಚ್ಚಿದಾನಂದ ಚಿದ್ರೆ, ರಾಜೇಶ್ವರ, ಬಸವೇಶ್, ಗುಂಡಪ್ಪ ಬಳತೆ, ಶಿವರಾಜ ಮದಕಟ್ಟಿ ಇದ್ದರು.
ಉಷಾ ಮಿರ್ಚೆ ವಚನ ಗಾಯನ ಮಾಡಿದರು. ಫೌಂಡೇಷನ್ ಕಾರ್ಯದರ್ಶಿ ಸುವರ್ಣಾ ಧನ್ನೂರ ಸ್ವಾಗತಿಸಿದರು. ಸ್ಫೂರ್ತಿ ಧನ್ನೂರ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ವಂದಿಸಿದರು.