ಬೀದರ್: ತಾಲ್ಲೂಕಿನ ಮಂದಕನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿಯಮ ಗಾಳಿಗೆ ತೂರಿ ನಿವೇಶನಗಳ ಖಾತಾ ಮಾಡಿಕೊಡಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆ ದೂರಿದೆ.
ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಎ. ಯಾದವ್ ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕೃಷಿಯೇತರ (ಎನ್.ಎ.) ಮಾಡಲಾದ ಮಂದಕನಳ್ಳಿ ಗ್ರಾಮದ ಅಬ್ದುಲ್ ಹಬೀಬ್ ಅಬ್ದುಲ್ ರಹಮಾನ್ ಅವರ ಸರ್ವೇ ಸಂಖ್ಯೆ 6/*/4 ರಲ್ಲಿನ 4 ಎಕರೆ 1 ಗುಂಟೆ ಜಮೀನಿನಲ್ಲಿ ಲೇಔಟ್ ಮಾಡಲಾಗಿಲ್ಲ. ಸಿ.ಎ. ನಿವೇಶನ, ಉದ್ಯಾನ ಹಾಗೂ ರಸ್ತೆ ಸ್ಥಳವನ್ನು ಪಂಚಾಯಿತಿಗೆ ಹಸ್ತಾಂತರಿಸಲಾಗಿಲ್ಲ. ಅದಾಗಿಯೂ ಪಿಡಿಒ 102 ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರಿಂದ ಸಾರ್ವಜನಿಕರಿಗೆ ಮೂಲಸೌಕರ್ಯದ ಕೊರತೆ ಉಂಟಾಗಲಿದೆ. ಉದ್ಯಾನವಿಲ್ಲದೆ ಮಕ್ಕಳು ಮನೋರಂಜನೆಯಿಂದ ವಂಚಿತರಾಗಲಿದ್ದಾರೆ. ಸಿ.ಎ. ಸೈಟ್‍ನಲ್ಲಿ ಖಾತೆ ತೆಗೆದಿರುವುದರಿಂದ ಸರ್ಕಾರಕ್ಕೆ ನಷ್ಟವಾಗಲಿದೆ ಎಂದು ದೂರಿದ್ದಾರೆ.
ಇದೇ ರೀತಿ ಇನ್ನೂ ಅನೇಕ ಜಮೀನುಗಳ ಖಾತೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕೂಡಲೇ ನಿಯಮ ಉಲ್ಲಂಘಿಸಿ ತೆಗೆದ ಖಾತಾಗಳನ್ನು ರದ್ದುಪಡಿಸಬೇಕು. ಲೇಔಟ್ ಮಾಡಿಸಿ, ಸಿ.ಎ. ನಿವೇಶನ, ಉದ್ಯಾನ ಹಾಗೂ ರಸ್ತೆ ಜಾಗವನ್ನು ಪಂಚಾಯಿತಿಗೆ ಹಸ್ತಾಂತರ ಮಾಡಿಕೊಳ್ಳಲು ಆದೇಶಿಸಬೇಕು. ಕರ್ತವ್ಯ ಲೋಪ ಎಸಗಿರುವ ಪಿಡಿಒ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.