ಬೀದರ್: ನಾಟ್ಯಶ್ರೀ ನೃತ್ಯಾಲಯ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಫೆ. 8 ರಂದು ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ ಹಾಗೂ ನಾಟ್ಯಶ್ರೀ ಪ್ರಶಸ್ತಿ- 2025 ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10.30 ರಿಂದ ಸಂಜೆ ವರೆಗೆ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ ಎಂದು ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ತಿಳಿಸಿದ್ದಾರೆ.
ನಟರಾಜ ಪೂಜೆಯೊಂದಿಗೆ ‘ನಾಟ್ಯಶ್ರೀ ಸಾಂಸ್ಕøತಿಕ ವೈಭವ’ ಆರಂಭವಾಗಲಿದೆ. ‘ಶಾಸ್ತ್ರೀಯ ಸಂಗೀತ ಲಹರಿ’ಯಲ್ಲಿ ಕಲಬುರಗಿಯ ಹಿಂದೂಸ್ತಾನಿ ಗಾಯಕ ಪಂಡಿತ ಹಣಮಂತರಾವ್ ಮಳ್ಳಿ ದಾಸರ ಪದಗಳನ್ನು ಸುಮಧುರವಾಗಿ ಹಾಡಲಿದ್ದಾರೆ. ಸಂಗಯ್ಯ ಸ್ವಾಮಿ ಡೊಂಗರಗಾಂವ್ ಹಾರ್ಮೋನಿಯಂ, ಪಂಡಿತ ರಾಮಚಂದ್ರ ಕಲ್ಲಹಿಪ್ಪರ್ಗಿ ತಲಬಾ ಸಾಥ್ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ನಾಟ್ಯಶ್ರೀ ನೃತ್ಯಾಲಯದ ಕಲಾವಿದೆಯರು ಪುಷ್ಪಾಂಜಲಿ, ನಟರಾಜ ನೃತ್ಯ, ದಶಾವತಾರ, ಕೃಷ್ಣನ ಲೀಲೆ, ಭಾಗ್ಯದ ಲಕ್ಷ್ಮಿ ಬಾರಮ್ಮ, ನಟೇಶ ಕೌಥುವಂ, ತಿಲ್ಲಾನ, ವಚನ ನೃತ್ಯ ಪ್ರಸ್ತುತಪಡಿಸಲಿದ್ದಾರೆ. ‘ಕನಕದಾಸರಿಗೆ ಶ್ರೀ ಕೃಷ್ಣನ ದರ್ಶನ’, ‘ಮಹಾಶಕ್ತಿ ವೀರಭದ್ರ’ ನೃತ್ಯ ರೂಪಕಗಳನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳೂರಿನ ಬಾಲನಟ ಮಾಸ್ಟರ್ ಶೌರ್ಯರಾವ್ ವಿಶೇಷ ನೃತ್ಯ, ವಿದುಷಿ ಸೌಂದರ್ಯ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಹೇಳಿದ್ದಾರೆ.
‘ಜಾನಪದ ನೃತ್ಯ ಸಂಭ್ರಮ’ದಲ್ಲಿ ನೃತ್ಯಾಲಯದ ಕಲಾವಿದೆಯರು ವಚನ ನೃತ, ಗರ್ಬಾ, ರೈತ ಗೀತೆ, ಜಾನಪದ ಗೀತೆ, ಕೋಲಾಟ, ಭಾಂಗಡ, ಅಘೋರಿ ನೃತ್ಯ, ಮರಾಠಿ ನೃತ್ಯ ಹಾಗೂ ಒನಕೆ ಓಬವ್ವ ನೃತ್ಯ ರೂಪಕ ಪ್ರದರ್ಶಿಸಲಿದ್ದಾರೆ. ಬೆಂಗಳೂರಿನ ಜಾದೂಗಾರ ನಾರಾಯಣ ಭಟ್ ಮಾಯಾ ಜಾದೂ ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಜೆ 3.45ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ, ಸಭಾ ಕಾರ್ಯಕ್ರಮ ಹಾಗೂ ಸಾಹಿತಿಗಳೊಂದಿಗೆ ಸಂವಾದವನ್ನು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಹಾಗೂ ಸಾಹಿತಿ ಡಾ. ಡಿ.ವಿ. ಗುರುಪ್ರಸಾದ್ ಉದ್ಘಾಟಿಸುವರು. ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ, ಸಾಹಿತಿ ಶಿವಕುಮಾರ ಕಟ್ಟೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಸಾಮಾಜಿಕ ಚಿಂತಕಿ ಡಾ. ನೀತಾ ಬೆಲ್ದಾಳೆ, ಪ್ರಧಾನ ಅಂಚೆ ಪಾಲಕಿ ಮಂಗಲಾ ಭಾಗವತ್, ಸುಜಾತಾ ಪೂಜಾರಿ ಉಪಸ್ಥಿತರಿರಲಿದ್ದಾರೆ. ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಬಾಗಲಕೋಟೆಯ ವಿದುಷಿ ಶುಭದಾ ಗುರುರಾಜ ದೇಶಪಾಂಡೆ ಅವರಿಗೆ 2025ನೇ ಸಾಲಿನ ನಾಟ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಭಾನುಪ್ರಿಯಾ ಅರಳಿ ಸುಗಮ ಸಂಗೀತ, ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ ಹಾಗೂ ಮಹೇಶಕುಮಾರ ಕುಂಬಾರ ಜಾನಪದ ಸಂಗೀತ ನಡೆಸಿಕೊಡಲಿದ್ದಾರೆ ಎಂದು ಹೇಳಿದ್ದಾರೆ.