ಬೀದರ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಆಡಳಿತದ ಮೊದಲ ಬಜೆಟ್ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿಯಾಗಿದೆ. ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೇರಿಸಿರುವುದು ಸೇರಿದಂತೆ ಹಲವು ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡು ಮಧ್ಯಮ ವರ್ಗಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಇದು ಭಾರತದ "ಅರ್ಥ ಕ್ರಾಂತಿ"ಗೆ ಹೊಸ ಮುನ್ನುಡಿ ಬರೆಯುವ ಜೊತೆಗೆ ವಿಕಸಿತ, ಆತ್ಮನಿರ್ಭರ ಭಾರತಕ್ಕೆ ಭದ್ರ ಬುನಾದಿ ಹಾಕುವ ಬಜೆಟ್ ಆಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿ ಮಂಡಿಸಿದ ಬಜೆಟ್ ಹಲವು ದಾಖಲೆ ನಿರ್ಮಿಸಿದೆ. ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಳ ಮಾಡಿರುವುದು ಕ್ರಾಂತಿಕಾರಿ ನಿರ್ಧಾರವಾಗಿದೆ. ದೇಶದ ಕೋಟ್ಯಂತರ ಮಧ್ಯಮ ವರ್ಗದವರಿಗೆ ಇದು ಬಹು ದೊಡ್ಡ ಕೊಡುಗೆಯಾಗಿದೆ. ಎಲ್ಲ ತರಹದ ಆದಾಯ ತೆರಿಗೆಯ ಸ್ಲ್ಯಾಬ್ ನಲ್ಲಾದ ಬದಲಾವಣೆ ಕಾರಣಕ್ಕಾಗಿ ಮಧ್ಯಮ ವರ್ಗದ ಜನರಿಗೆ ಸರಾಸರಿ ವಾರ್ಷಿಕ 1 ಲಕ್ಷ ರೂ.ಗಳಷ್ಟು ಉಳಿತಾಯ (ಲಾಭ) ಆಗಲಿದೆ. ಇದು ಬರುವ ದಿನಗಳಲ್ಲಿ ದೇಶದ ಜಿಡಿಪಿ ಗಣನೀಯ ವೃದ್ಧಿಸಲು ಕಾರಣವಾಗಲಿದೆ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ವಿಶ್ಲೇಷಿಸಿದ್ದಾರೆ.
ರೈತರು, ಬಡವರು, ಹಿಂದುಳಿದವರು, ಮಹಿಳೆಯರು, ಯುವಕರು, ಉದ್ಯಮಿದಾರರು, ವಿದ್ಯಾರ್ಥಿಗಳು ಹೀಗೆ ಎಲ್ಲ ರಂಗ, ಎಲ್ಲ ವರ್ಗದವರ ಹಿತ ಇಲ್ಲಿದೆ. ಇದೊಂದು ಜೋರ್ ದಾರ್ ಹಾಗೂ ಶಾನ್ ದಾರ್ ಬಜೆಟ್ ಎನಿಸಿದೆ. ಯಾವುದೇ ಕ್ಷೇತ್ರಕ್ಕೆ ಕಡೆಗಣಿಸಿಲ್ಲ. ಸಮಗ್ರ ಅಭಿವೃದ್ಧಿಗಾಗಿ ಮೇಕ್ ಇನ್ ಇಂಡಿಯಾ ತಳಹದಿಯ ಮೇಲೆ ಕೇಂದ್ರ ಸರ್ಕಾರ ಹೊಂದಿರುವ ದೂರದೃಷ್ಟಿತ್ವವೇ (ವಿಜನ್) ಇಲ್ಲಿ ಅನಾವರಣವಾಗಿದೆ. ಯಾವುದೇ ಮಗ್ಗುಲಿನಿಂದ ನೋಡಿದರೂ ಇದು ಭವ್ಯ, ಬಲಿಷ್ಠ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್ ಎಂಬುದು ಸ್ಪಷ್ಟವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಕೃಷಿ ಅಭಿವೃದ್ಧಿ ಮತ್ತು ಉತ್ಪಾದಕತೆಗೆ ಉತ್ತೇಜನ, ಕಿರು ಮತ್ತು ಮಧ್ಯಮ ಉದ್ಯಮ ಅಭಿವೃದ್ಧಿ, ಉದ್ಯೋಗಾಧಾರಿತ ಅಭಿವೃದ್ಧಿ, ರಕ್ಷಣೆ ಮತ್ತು ಸಂಶೋಧನೆಗೆ ಒತ್ತು, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 3 ರಿಂದ 5ಲಕ್ಷಕ್ಕೇರಿಕೆ, ನೀರಾವರಿ ಸೌಲಭ್ಯ ವಿಸ್ತರಣೆ ಯೋಜನೆ, ಹೆಚ್ಚಿನ ಇಳುವರಿ ಬೀಜಗಳಿಗಾಗಿ ಪ್ರತ್ಯೇಕ ಮಿಷನ್, ಇಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಉಪಕರಣಗಳ ಬೆಲೆ ಇಳಿಕೆಯೊಂದಿಗೆ ಉತ್ಪನ್ನ ಹೆಚ್ಚಳಕ್ಕೆ ಕ್ರಮ, ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆಗೆ ಯೋಜನೆ, ಎಲ್ಲ ಶಾಲೆಗಳಿಗೆ ಬ್ರಾಡ್ ಬ್ಯಾಂಡ್ ಸೌಕರ್ಯ, ಮೆಡಿಕಲ್ ಸೀಟು ಹೆಚ್ಚಳ, ಪ್ರತಿ ಜಿಲ್ಲೆಗೊಂದು ಕ್ಯಾನ್ಸರ್ ಕೇರ್ ಸೆಂಟರ್ ಹಾಗೂ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ, ಹೊಸ ಮಹಿಳಾ ಉದ್ಯಮಿದಾರರಿಗೆ 2 ಕೋಟಿವರೆಗೆ ಅವಧಿ ಸಾಲ, ಉಡಾನ್ ಯೋಜನೆಯಡಿ 4 ಕೋಟಿ ಜನರಿಗೆ ವಿಮಾನಯಾನದ ಲಾಭ ಹೀಗೆ ಅನೇಕ ಮಹತ್ವದ ಜನಪರ ಯೋಜನೆ ಘೋಷಣೆ ಮುಖಾಂತರ ದೇಶದ ಜನರ ಮನ ಗೆಲ್ಲುವ ಜೊತೆಗೆ ಅಭಿವೃದ್ಧಿಯಲ್ಲಿ ಹೊಸ ಭರವಸೆ ಮೂಡಿಸುವ ಕಾರ್ಯ ಮಾಡಲಾಗಿದೆ ಎಂದು ಬಣ್ಣಿಸಿದ್ದಾರೆ.