ಬೀದರ್: ಸೇಡಂನಲ್ಲಿ ಜ. 29 ರಿಂದ ಫೆ. 6 ರ ವರೆಗೆ ನಡೆಯಲಿರುವ ಏಳನೇ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದಿಂದ ಮಂಗಳವಾರ 1 ಲಕ್ಷ ರೊಟ್ಟಿ ಕಳುಹಿಸಿಕೊಡಲಾಯಿತು.
ಬಾಕ್ಸ್‍ಗಳಲ್ಲಿ ತುಂಬಿದ್ದ ಬಿಳಿ ಜೋಳ ಹಾಗೂ ಸಜ್ಜೆ ರೊಟ್ಟಿಗಳನ್ನು ಟೆಂಪೊದಲ್ಲಿ ಸೇಡಂಗೆ ಸಾಗಿಸಲಾಯಿತು.
ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ದಾಸೋಹ ಸೇವೆಗಾಗಿ ರೊಟ್ಟಿ ಕಳುಹಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಗೂ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಮಣಗಿರೆ ತಿಳಿಸಿದರು.
ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಸಹ ಸಂಚಾಲಕ ಗಣಪತಿ ಹಡಪದ, ಬೀದರ್ ನಗರ ಸಂಚಾಲಕ ಸಂತೋಷಕುಮಾರ ಮಂಗಳೂರೆ, ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಬೀದರ್ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗಣಪತಿ ಸೋಲಪುರೆ ಮತ್ತಿತರರು ಇದ್ದರು.