ಬೀದರ್: ನಗರದಲ್ಲಿ ಇತ್ತೀಚೆಗೆ ನಡೆದ ಶೂಟೌಟ್ ಮತ್ತು ದರೋಡೆ ಘಟನೆಯ ದುಷ್ಕರ್ಮಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ದರೋಡೆ ಪ್ರಕರಣದಲ್ಲಿ ದುಷ್ಕರ್ಮಿಗಳನ್ನು ಪೊಲೀಸರು ಈಗಾಗಲೇ ಗುರುತಿಸಿದ್ದು, ಎಲ್ಲಿನವರು ಮತ್ತು ಅವರ ಕುಟುಂಬದ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆಯಾ ರಾಜ್ಯದ ಪೊಲೀಸ್ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ, ಶೀಘ್ರದಲ್ಲಿ ತನಿಖಾ ತಂಡಗಳು ದುಷ್ಕರ್ಮಿಗಳನ್ನು ಬಂಧಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕೃತ್ಯ ಎಸಗಿದವರು ಕ್ರಿಮಿನಲ್ ಗಳು. ಅವರ ಮೇಲೆ ವಿವಿಧ ರಾಜ್ಯಗಳಲ್ಲಿ ಹಲವು ಪ್ರಕರಣಗಳಿವೆ. ಎಲ್ಲೇ ಅಡಗಿದ್ದರೂ ಪೊಲೀಸರು ಅವರನ್ನು ಬಂಧಿಸಲಿದ್ದಾರೆ. ಆರೋಪಿಗಳ ಶೋಧಕ್ಕಾಗಿ ನಿರಂತರ ಪ್ರಯತ್ನಿಸುತ್ತಿರುವ ಪೊಲೀಸರಿಗೆ ದೈಹಿಕ ಮತ್ತು ಮಾನಸಿಕವಾಗಿ ಬೆಂಬಲ ನೀಡಬೇಕು ಎಂದು ಹೇಳಿದರು.
ಶೂಟೌಟ್ ಪ್ರಕರಣದಲ್ಲಿ ಮೃತ ಗಿರಿ ವೆಂಕಟ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ. ಮತ್ತು ವಯಕ್ತಿಕವಾಗಿ ಪರಿಹಾರ ನೀಡಲಾಗಿದೆ. ಗಾಯಗೊಂಡ ಶಿವಕುಮಾರ ಆಸ್ಪತ್ರೆ ವೆಚ್ಚವನ್ನು ಜಿಲ್ಲಾಡಳಿತವು ಸಿಎಂಎಸ್ ಕಂಪನಿ ಮೂಲಕ ಭರಿಸಲು ಕ್ರಮ ವಹಿಸಿದೆ. ಇನ್ನೂ ಶಿವಕುಮಾರಗೆ ಗುತ್ತಿಗೆ ಆಧಾರದ ಮೇಲೆ ಉದ್ಯಯೋಗಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.