ಜಿಲ್ಲೆ

ಮಾದಿಗರ ಜಾಗೃತಿ ಸಮಾವೇಶ ಫೆ.1ಕ್ಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಶಿವಶರಣ ಮಾದಾರ ಚನ್ನಯ್ಯ ಜಯಂತ್ಯುತ್ಸವ ನಿಮಿತ್ತ ಮಾದಿಗ ಸಮಾಜ ಜಾಗೃತಿ ಸಮಾವೇಶ ಫೆ.1ರಂದು ಬೆಳಗ್ಗೆ 11.30ಕ್ಕೆ ನೌಬಾದ್ ಬಳಿಯ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗರ ಕಲ್ಯಾಣ ಸಂಘದ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್ ಹೇಳಿದರು.

ಮಾದಿಗರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭವ್ಯ ಕಾರ್ಯಕ್ರಮ ಆಯೋಜಿಸಿದ್ದು, ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ವಾದಿರಾಜ, ಸಚಿವರಾದ ಈಶ್ವರ ಖಂಡ್ರೆ, ರಹೀಮ್ ಖಾನ್, ಸಂಸದ ಸಾಗರ ಖಂಡ್ರೆ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಇತರರು ಪಾಲ್ಗೊಳ್ಳುವರು ಎಂದರು.

ಇತ್ತೀಚೆಗೆ ವಿಜಯಪುರದಲ್ಲಿ ಸಮಾಜದ ಕೂಲಿಕಾರ್ಮಿಕ ಸದಾಶಿವ ಮಾದರ ಇತರ ಇಬ್ಬರಿಗೆ ಕೈಕಾಲು ಕಟ್ಟಿ ಥಳಿಸಿ ಚಿತ್ರಹಿಂಸೆ ನೀಡಿದ್ದನ್ನು ಖಂಡಿಸಲಾಗುವುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಮನೆಯಿಂದ ಹೊರಬರಲು ಜನ ಹೆದರುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರಮುಖರಾದ ರಮೇಶ ಕಟ್ಟಿತೂಗಾಂವ, ದಯಾನಂದ ವಕೀಲ, ಪ್ರಕಾಶ ಹಳ್ಳಿಖೇಡ್, ನೀಲಕಂಠ ಭಂಡೆ, ಕಮಲಹಾಸನ್ ಬಾವಿದೊಡ್ಡಿ, ಜೇಮ್ಸ್ ಇಸ್ಲಾಂಪುರ, ಶಿವರಾಜ ನೆಲವಾಳಕರ್, ಸೀಮನ್, ಮೋಹನ್, ಸಿದ್ಧಾರ್ಥ ಇತರರಿದ್ದರು.