ಬೀದರ್: ಜಿದ್ದಾಜಿದ್ದಿನ ಹಣಾಹಣಿಯಿಂದಾಗಿ ಕುತೂಹಲ ಕೆರಳಿಸಿದ್ದ ಬೀದರ್ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಕಾಡ್೯) ಬಗದಲ್ ಕ್ಷೇತ್ರದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಭರ್ಜರಿ ಜಯ ಸಿಕ್ಕಿದ್ದು, ಕಾಂಗ್ರೆಸ್ ಬೆಂಬಲಿತ ಹೀನಾಯ ಸೋಲುಂಡಿದ್ದಾರೆ.
14 ಆಡಳಿತ ಮಂಡಳಿ ಸ್ಥಾನಗಳಲ್ಲಿ 13ಕ್ಕೆ ಅವಿರೋಧ ಆಯ್ಕೆಯಾಗಿದೆ. ಬಗದಲ್ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮಾತ್ರ ಭಾನುವಾರ ಗುರುನಗರ ಪಿಕಾಡ್೯ ಬ್ಯಾಂಕ್ ಕಚೇರಿಯಲ್ಲಿ ಮತದಾನ ನಡೆಯಿತು. ಬಿಜೆಪಿ ಬೆಂಬಲಿತ ಈಶ್ವರಿಬಾಯಿ ಮಲಶೆಟ್ಟಿ ಬಗದಲ್ 49 ಮತ ಗಳಿಸಿ ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್ ಬೆಂಬಲಿತೆ ನೂರಜಹಾ ಬೇಗಂ ಮರಕುಂದಾ 25 ಮತ ಪಡೆದು ಸೋತಿದ್ದಾರೆ. ಆಯ್ಕೆ ಘೋಷಿಸುತ್ತಿದ್ದಂತೆ ಈಶ್ವರಿಬಾಯಿ ಬೆಂಬಲಿಗರು ವಿಜಯೋತ್ಸವ ನಡೆಸಿದರು.
ಬಿಜೆಪಿ ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಗುರುನಾಥ ರಾಜಗೀರಾ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ತರಬಾರದು. ಈ ನಿಟ್ಟಿನಲ್ಲಿ ನಾವು ಚುನಾವಣೆಗೆ ತಯಾರಿ ಮಾಡಿಕೊಂಡಿದ್ದೆವು. ಅದರೆ ಕಾಂಗ್ರೆಸಿಗರು ರಾಜಕೀಯ ಎಳೆದು ತರುವಂಥ ಕೆಲಸ ಮಾಡಿದ್ದು, ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರ ಹಾಗೂ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಗೆಲುವಾಗಿದೆ ಎಂದು ಹೇಳಿದರು.