ಜಿಲ್ಲೆ

ದುಶ್ಚಟ ತೊರೆದರೆ ನೆಮ್ಮದಿ ಜೀವನ

ರೇವಣಸಿದ್ದಪ್ಪ ಪಾಟೀಲ್

ಔರಾದ್: ಮದ್ಯ, ಜೂಜಾಟ ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳನ್ನು ತೊರೆದವರ ಬದುಕಿನಲ್ಲಿ ಸದಾ ನೆಮ್ಮದಿ ಇರಲಿದೆ. ಜತೆಗೆ ಸಮಾಜದಲ್ಲಿ ಉನ್ನತ ಗೌರವ ಸಿಗಲಿದೆ ಎಂದು ಭಾಲ್ಕಿ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದೇವರು ಹೇಳಿದರು.

ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶೈಕ್ಷಣಿಕ ಜೀವನ ಅಮೂಲ್ಯವಾದದ್ದು. ಹೀಗಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ವ್ಯಾಸಂಗ ಮಾಡಬೇಕು ಎಂದು ಸಲಹೆ ನೀಡಿದರು.

ಜಗತ್ತಿನಲ್ಲಿ ಜ್ಞಾನಕ್ಕೆ ಅತ್ಯಮೂಲ್ಯವಾದ ಬೆಲೆ ಇದೆ. ಹೀಗಾಗಿ ಸಾಧನೆ ಮಾಡಿದ ವ್ಯಕ್ತಿಯನ್ನು ಪ್ರೇರಣೆಯಾಗಿ ಇಟ್ಟುಕೊಂಡು ಸಾಧಿಸಬೇಕು. ಸತತ ಪ್ರಯತ್ನವೇ ಯಶಸ್ಸಿನ ಮಂತ್ರ. ಸಮಯಕ್ಕೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಸಂಸ್ಕಾರದೊಂದಿಗೆ ಜ್ಞಾನವಂತರಾಗಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ನವೀಲಕುಮಾರ ಉತ್ಕಾರ್ ಮಾತನಾಡಿ, ಪ್ರತಿಯೊಂದು ಕಾರ್ಯಕ್ಕೆ ಆಂತರಿಕ ಹಾಗೂ ಬಾಹ್ಯ ಪ್ರೇರಣೆ,ಪ್ರೋತ್ಸಾಹಗಳಿಂದ ಕೆಲಸಗಳು ಪೂರ್ಣಗೊಳ್ಳಲು ಸಾಧ್ಯ ಎಂದರು.

ಕಾಲೇಜಿನಿಂದ ಹೊರತಂದಿರುವ 2025ನೇ ಸಾಲಿನ ದಿನದರ್ಶಿಕೆಯನ್ನು ಕಮಲನಗರ ಗ್ರಾಪಂ ಅಧ್ಯಕ್ಷ ಗಿರೀಶ್ ವಡೆಯರ್ ಬಿಡುಗಡೆಗೊಳಿಸಿದರು. ಧನರಾಜ ದೇಶಮುಖ ಉದ್ಘಾಟಿಸಿದರು. ರವಿ ಗಂಗಾ, ಕಿಶನ್ ಬೇಬರೆ, ಮೋಬಾಸಿರ್ ಖಾನ್, ಪ್ರತೀಕ್ಷಾ ಪಾಟೀಲ್, ಪಂಢರಿ ಪಾಟೀಲ್, ದೊಂಡುಬಾಯಿ ಟೀಳೆಕರ್, ಅಮಿತ್ ಭಾಂಡೆ, ವಿಶಾಲ ಟೀಳೆಕರ್ ಅವರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕರಾದ ಶಿವಪುತ್ರ ಧರಣಿ, ರಾಜಕುಮಾರ ಹಳ್ಳಿಕರ್, ಸುಧೀರ ಆಲೂರೆ, ಸಂತೋಷ ಧೂಳಗಂಡೆ, ಜೀತೇಂದ್ರ ಡಿಗ್ಗಿ, ವನದೇವಿ ಎಕ್ಕಳೆ, ಅಶ್ವಿನಿ ಹಿಂದೊಡ್ಡಿ, ನಿರ್ಮಲಾ ಜಮಾದಾರ್, ಪ್ರಿಯಾಂಕಾ ಗುನ್ನಳ್ಳಿಕರ್, ಮೀರಾತಾಯಿ ಕಾಂಬ್ಳೆ ಇತರರಿದ್ದರು.