ಜಿಲ್ಲೆ

ಟನ್ ಕಬ್ಬಿಗೆ ರೂ.100 ಹೆಚ್ಚುವರಿ ಕೊಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಟನ್ ಕಬ್ಬಿಗೆ ಈ ಬಾರಿ 100 ರೂ. ಹೆಚ್ಚುವರಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.

ಕಬ್ಬಿನ ದರ ನಿಗದಿ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಹಾಗೂ ರೈತರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರೈತರಿಗೆ ಅನುಕೂಲವಾಗುವಂತೆ ಕಾರ್ಖಾನೆಗಳು ಕಳೆದ ವರ್ಷಕ್ಕಿಂತ ಟನ್‌ಗೆ 100 ರೂ. ಹೆಚ್ಚು ದರ ನೀಡಬೇಕು. ಕಳೆದ ವರ್ಷ ಟನ್‌ಗೆ 2600 ರೂ. ನೀಡಿದ್ದು, ಈಗ 2700 ರೂ. ಮತ್ತು ಒಂದು ಕೆಜಿ ಸಕ್ಕರೆ ಕೊಡುವಂತೆ ಕಾರ್ಖಾನೆಯವರಿಗೆ ಸೂಚಿಸಿದರು.

ಕಬ್ಬು ಸಾಗಿಸಿದ ಬೆಳೆಗಾರರಿಗೆ ಕಾರ್ಖಾನೆಗಳು ಕಡ್ಡಾಯವಾಗಿ ಎರಡು ವಾರಕ್ಕೊಮ್ಮೆ ಹಣ ಪಾವತಿಸಬೇಕು. ಆಕಸ್ಮಿಕ ಬೆಂಕಿ ತಗುಲಿದ ಕಬ್ಬು ಬೆಳೆಯನ್ನು ಆದ್ಯತೆ ಮೇರೆಗೆ ಕಟಾವು ಮಾಡಿ ಸಾಗಿಸಬೇಕು ಎಂದರು.

ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ಕನಿಷ್ಠ 3000 ರೂ. ಟನ್ಗೆ ನೀಡುವಂತೆ ರೈತ ಸಂಘದ ಮುಖಂಡರು ಸಭೆ ಗಮನಕ್ಕೆ ತಂದರು. ಸಕ್ಕರೆ ಕಾರ್ಖಾನೆ ಅಧ್ಯಕ್ಷರ ಸಮಸ್ಯೆಗಳನ್ನು ಸಹ ಸಚಿವ ಖಂಡ್ರೆ ಆಲಿಸಿದರು. ಈ ಬಾರಿ ಸಕ್ಕರೆ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆಯಾಗಿದ್ದು, ಮೊಲಾಸಿಸ್ ದರವೂ ಕಮ್ಮಿಯಾಗಿದೆ. ಕಬ್ಬು ಕಟಾವು ಬೆಲೆ ದುಬಾರಿ ಆಗಿದ್ದರಿಂದ ಕಾರ್ಖಾನೆ ಮೇಲೆ ಹೊರೆಯಾಗುತ್ತಿದೆ ಎಂದು ಮಾಲೀಕರು ಹೇಳಿದರು.

ಅಪರ ಜಿಲ್ಲಾಕಾರಿ ಶಿವಕುಮಾರ ಶೀಲವಂತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಪ್ರವೀಣ ಬರಗಲ್, ನಾರಾಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಮಹಾತ್ಮಗಾಂ ಸಕ್ಕರೆ ಕಾರ್ಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ್, ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪ ಆಣದೂರೆ, ಶೇಷರಾವ ಕಣಜಿ, ಕಾಶೀನಾಥ ಮಲಶೆಟ್ಟಿ, ಖಾಸೀಂ ಅಲಿ, ವಿಠ್ಠಲರಾವ ಮೇತ್ರೆ, ಸೋಮನಾಥ ಬಣಕೂರ, ಸತೀಶ್ ನನ್ನೂರೆ, ನಾಗನಾಥ ಪಾಟೀಲ್, ಕರಬಸಪ್ಪ ಹುಡಗಿ, ಶಾಂತಮ್ಮ ಮಾಲಗೆ, ರಾಮರಾವ, ವಿಠ್ಠಲರಡ್ಡಿ ಇತರರಿದ್ದರು.

ತೊಗರಿ ನಷ್ಟದ ಸಮೀಕ್ಷೆ

ಜಿಲ್ಲೆಯಲ್ಲಿ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೂ ಮತ್ತು ಕಾಯಿ ಹಾನಿಯಾದ ಕುರಿತು ಸಭೆಯಲ್ಲಿ ರೈತರು ಮನವಿ ಮಾಡಿದ ಹಿನ್ನೆಲೆಯಲ್ಲಿ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಬಗ್ಗೆ ಸಮೀಕ್ಷೆ ನಡೆಸುವಂತೆ ಸಚಿವ ಈಶ್ವರ ಖಂಡ್ರೆ ಸೂಚಿಸಿದರು. ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಮಾಡಲಾಗುತ್ತಿದೆ. ಜಿಲ್ಲೆಯ 70 ಕಡೆ ಖರೀದಿ ಕೇಂದ್ರ ಆರಂಭಿಸಲಾಗಿದೆ. ಶೀಘ್ರವೇ ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಇನ್ನಷ್ಟು ಹೆಚ್ಚಿನ ಕೇಂದ್ರಗಳ ಅಗತ್ಯವಿದ್ದಲ್ಲಿ ಸ್ಥಾಪಿಸಲಾಗುವುದು ಎಂದರು.