ಜಿಲ್ಲೆ

ಜಿಲ್ಲೆಗೆ 15 ಸಾವಿರ ಮನೆ ಮಂಜೂರು

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಜಿಲ್ಲೆಗೆ 15 ಸಾವಿರ ಮನೆಗಳು ಮಂಜೂರಾಗಿವೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ 2024-25ರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದ ಪಿಎಂಎವೈ (ಜಿ) ಅಡಿ ಫಲಾನುಭವಿಗಳಿಗೆ ಮನೆ ಮಂಜೂರಾತಿ ತಿಳಿವಳಿಕೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆ ಮತ್ತು ನಿವೇಶನ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದರು.

ಭಾಲ್ಕಿ ತಾಲೂಕಿನ ಗ್ರಾಮಾಂತರ ವ್ಯಾಪ್ತಿಗೆ ಮೂರು ಸಾವಿರ ಮನೆ ಮಂಜೂರಾಗಿದ್ದು, ಈ ಪೈಕಿ ಮೊದಲ ಹಂತದ 665 ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ನೀಡಲಾಗುತ್ತಿದೆ ಎಂದರು.

ಸಾಮಾನ್ಯ ಜನರಿಗೆ ಮೊದಲನೇ ಕಂತಿನಲ್ಲಿ 30 ಸಾವಿರ ರೂ, ಎರಡನೇ ಕಂತಿನದಲ್ಲಿ 60 ಸಾವಿರ ರೂ, ಮೂರನೇ ಕಂತಿನಲ್ಲಿ 30 ಸಾವಿರ ಸೇರಿ ಒಟ್ಟು 1.20 ಲಕ್ಷ ರೂ. ಹಣ ಸಂಬಂಸಿದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೊದಲನೇ ಕಂತಿನಲ್ಲಿ 43,750 ರೂ., ಎರಡನೇ ಕಂತಿನಲ್ಲಿ 87,500 ರೂ., ಮೂರನೇ ಕಂತಿನಲ್ಲಿ 43,750 ರೂ. ಜಮಾ ಮಾಡಲಾಗುವುದು ಎಂದು ಹೇಳಿದರು.

ಮಧ್ಯವರ್ತಿಗಳ ನಂಬಬೇಡಿ. ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಮೊದಲ ಕಂತು ಜಮೆಯಾದ ತಕ್ಷಣವೇ ಮನೆ ಕಾಮಗಾರಿ ಆರಂಭಿಸಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಇನ್ನೂ ವಸತಿ ರಹಿತ ಇರುವವರ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ. ಅಂಥವರಿಗೆ ಮುಂದಿನ ಸಮಯದಲ್ಲಿ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಹೇಳಿದರು.

ಮುಖಂಡರಾದ ಹಣಮಂತರಾವ ಚವ್ಹಾಣ್, ವಿಲಾಸ ಮೋರೆ ಇತರರಿದ್ದರು.