ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದ ಹಾವಗಿಲಿಂಗೇಶ್ವರ ಸಂಸ್ಥಾನ ಮಠದಲ್ಲಿ ದ್ವಾದಶ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರಿಗೆ ನಿತ್ಯ ಒಬ್ಬರು ಭಕ್ತರಿಂದ ತುಲಾಭಾರ ಸೇವೆ ನೆರವೇರುತ್ತಿದೆ.
ಆರು ದಿನಗಳಲ್ಲಿ ಆರು ಭಕ್ತರು ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ಮಾಡಿ ಭಕ್ತಿ ಸಮರ್ಪಿಸಿದ್ದಾರೆ. ನಂದಿನಿ ಸಂತೋಷ, ಆಕಾಶ ರಿಕ್ಕೆ, ರವೀಂದ್ರ ಶಾಸ್ತ್ರಿ, ಸಂತೋಷ ಕಾನ್‍ಸ್ಟೆಬಲ್, ಶಿವರಾಜ ಹಂಪಾ ಹಾಗೂ ಉಷಾ ವಸಂತ ವಕೀಲ್ ಅವರು ತುಲಾಭಾರ ಸೇವೆಗೈದ ಭಕ್ತರು.
ಜಾತ್ರೆ ಜ. 11 ಕ್ಕೆ ಕೊನೆಗೊಳ್ಳಲಿದ್ದು, ಅಲ್ಲಿಯವರೆಗೂ ನಿತ್ಯ ತುಲಾಭಾರ ಸೇವೆ ಜರುಗಲಿದೆ.
ದ್ವಾದಶ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಭಕ್ತರು ಸ್ವಯಂ ಪ್ರೇರಣೆಯಿಂದ ಅದ್ಧೂರಿ ಸಮಾರಂಭ, ತುಲಾಭಾರ ಸೇವೆ, ಸತ್ಕಾರ, ದಾಸೋಹದ ಮೂಲಕ ಭಕ್ತಿ ಸಮರ್ಪಣೆ ಮಾಡಿರುವುದು ಸಂತಸ ಉಂಟು ಮಾಡಿದೆ. ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ಮತ್ತಷ್ಟು ಉತ್ಸಾಹದಿಂದ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದು ಹಾವಗಿಲಿಂಗೇಶ್ವರ ಶ್ರೀ ತಿಳಿಸಿದರು.