ಬೀದರ್: ಶಿವಶರಣೆ ಅಕ್ಕಮಹಾದೇವಿ ಅವರ ಐಕ್ಯಸ್ಥಳವಾದ ಶ್ರೀಶೈಲ್ ಬಳಿಯ ಕದಳಿವನದ ಅಭಿವೃದ್ಧಿಗಾಗಿ ಪ್ರಯತ್ನಿಸುವೆ ಎಂದು ನಾರಾಯಣಖೇಡ್ ಶಾಸಕ ಡಾ.ಪಿ. ಸಂಜೀವರಡ್ಡಿ ಹೇಳಿದರು.
ತೆಲಂಗಾಣದ ಸಂಗಾರಡ್ಡಿ ಜಿಲ್ಲೆಯ ನಾಗೂರ (ಬಿ) ಗ್ರಾಮದಲ್ಲಿ ಭಾಗೀರಥಿ ರಾಚಪ್ಪ ಕಾಡೋದೆ 31ನೇ ಸ್ಮರಣೋತ್ಸವ ಹಾಗೂ ಸರ್ವ ಶಿವಶರಣೆಯರ ಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕದಳಿವನ ಕುರಿತು ಸಿಎಂ ರೇವಂತರಡ್ಡಿ ಅವರ ಜತೆ ಸಮಾಲೋಚನೆ ನಡೆಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ಇನ್ನೊಮ್ಮೆ ಸಿಎಂ ಜತೆ ಸಭೆ ಏರ್ಪಡಿಸಲಾಗುವುದು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಭಾಗೀರಥಿ ತಾಯಿ ಅವರು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರಂಥಹ ಮಹಾನ್ ಗುರುವಿಗೆ ಜನ್ಮ ನೀಡಿರುವ ಮಹಾತಾಯಿ. ಅವರು ನೀಡಿರುವ ಸಂಸ್ಕಾರದಿಂದ ಕಾಡೋದೆಯವರ ಮನೆತನ ಬೆಳೆಯುತ್ತಿದೆ. ತಾಯಿಯವರ ತ್ಯಾಗದಿಂದ ಪ್ರಸ್ತುತ ಭಾಲ್ಕಿಯ ಹಿರೇಮಠ ರಾಜ್ಯ-ರಾಷ್ಟ್ರಮಟ್ಟದಲ್ಲಿ ಸೇವಾ ಸಾಧನೆ ಮೂಲಕ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಸೋಮನಾಥ ಮುದ್ದಾ, ವಿಜಯಕುಮಾರ ಪಾಟೀಲ್, ಶಿವರುದ್ರಯ್ಯಾ ಸ್ವಾಮಿ, ಸಿದ್ದಪ್ಪ ಮೂಲಗೆ ಮಾತನಾಡಿದರು. ಮೋಹನರಡ್ಡಿ, ಶಿವಕುಮಾರ ಘಾಟೆ, ಶಿವಶರಣಪ್ಪ ವಲ್ಲೇಪುರೆ, ಸಂಜೀವಕುಮಾರ ಜುಮ್ಮಾ, ಅಭೀಷೇಕ ಸ್ವಾಮಿ, ಸೋಮನಾಥ ಕಾಡೋದೆ, ಸಂಗಪ್ಪ ಕಾಡೋದೆ ಇತರರಿದ್ದರು. ಮಲ್ಲಿಕಾರ್ಜುನ ಗೊಗ್ಗಾ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಬಸವರಾಜ ಪಾಟೀಲ್ ಹಾಗೂ ಹಾವಗಿ ಶರಣರು ವಚನ ಸಂಗೀತ ನಡೆಸಿಕೊಟ್ಟರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿಯರು ವಚನ ಪಠಣ ಹಾಗೂ ಮಹಾಕ್ರಾಂತಿ ನಾಟಕ ಪ್ರಸ್ತುತಪಡಿಸಿದರು.