ಜಿಲ್ಲೆ

ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ ಆರಂಭ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಿದ್ಧರಾಮೇಶ್ವರ ನಮ್ಮೂರ 12ನೇ ಜಾತ್ರಾ ಮಹೋತ್ಸವ ಹಾಗೂ ಹಾವಗಿಲಿಂಗೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಬುಧವಾರ ಆರಂಭಗೊಂಡಿತು.

ಸಂಸದ ಸಾಗರ್ ಖಂಡ್ರೆ ಜಾತ್ರೆಗೆ ಚಾಲನೆ ನೀಡಿ, ನೂತನ ಹಾನಗಲ್ ಕುಮಾರ ಶಿವಯೋಗಿಗಳ ಮೂರ್ತಿ ಅನಾವರಣಗೊಳಿಸಿದರು.

ಸಾಮಾಜಿಕ ಪರಿವರ್ತನೆಯಲ್ಲಿ ಮಠ-ಮಾನ್ಯಗಳ ಪಾತ್ರ ಪ್ರಮುಖವಾಗಿದೆ ಎಂದು ಅವರು ಹೇಳಿದರು.

ಮಠಗಳಲ್ಲಿ ನಡೆಯುವ ಜಾತ್ರೆ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಜನರಿಗೆ ಸನ್ಮಾರ್ನದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.

ಯುವಕರು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಬಸವಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಧನ, ಸಂಪತ್ತು ಇದ್ದರೂ ಶಾಂತಿ, ನೆಮ್ಮದಿ ಇಲ್ಲವಾಗಿದೆ. ಇವು ಯಾವುದೇ ಅಂಗಡಿಯಲ್ಲಿ ಸಿಗುವ ವಸ್ತುಗಳಲ್ಲ. ಆಧ್ಯಾತ್ಮಿಕ ಕಾರ್ಯಕ್ರಮಗಳ ಮೊರೆ ಹೋದರೆ ಮಾತ್ರ ದೊರಕುತ್ತವೆ ಎಂದು ತಿಳಿಸಿದರು.

ಹಾವಗಿಲಿಂಗೇಶ್ವರ ಶಿವಾಚಾರ್ಯರ ಪರಿಶ್ರಮದಿಂದಾಗಿ ಹಲಬರ್ಗಾ ಮಠ ಈಗ ಹೆಮ್ಮರವಾಗಿ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೇತೃತ್ವ ವಹಿಸಿದ್ದ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಮಾತನಾಡಿ, ಸುಸಜ್ಜಿತ ಕಟ್ಟಡ, ಧ್ಯಾನ ಮಂದಿರ, ಸೋಮೇಶ್ವರ ನಿಲಯ, ಕಲ್ಯಾಣ ಮಂಟಪ, ಉದ್ಯಾನ ಮೊದಲಾದ ಅಭಿವೃದ್ಧಿ ಕಾರ್ಯಗಳಿಂದ ಮಠ ಎಲ್ಲರ ಗಮನ ಸೆಳೆಯುತ್ತಿದೆ. ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಿಂದ ಮಠದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ತಿಳಿಸಿದರು.

ಮಠದಲ್ಲಿ ನಡೆಯುವ ಆಧ್ಯಾತ್ಮಿಕ ಚಟುವಟಿಕೆಗಳಿಂದ ಬಹಳಷ್ಟು ಜನ ದುಶ್ಚಟಗಳನ್ನು ತ್ಯಜಿಸಿದ್ದಾರೆ. ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಸಮಾಜೋಧಾರ್ಮಿಕ ಕಾರ್ಯ ಹಾಗೂ ಭಕ್ತರ ಏಳಿಗೆಯೇ ತಮ್ಮ ಧ್ಯೇಯವಾಗಿದೆ ಎಂದು ಹೇಳಿದರು.

ಮಾತೆ ಬಸವಾಂಜಲಿ ಮಾತನಾಡಿದರು. ಪಿಎಸ್‍ಐ ನಂದಿನಿ ಸಂತೋಷ್ ದಂಪತಿ ನಾಣ್ಯಗಳಿಂದ ಹಾವಗಿಲಿಂಗೇಶ್ವರ ಶಿವಾಚಾರ್ಯರ ತುಲಾಭಾರ ಮಾಡಿದರು.

ಇದಕ್ಕೂ ಮುನ್ನ ರಾಚೋಟೇಶ್ವರ ಕತರ್ುೃ ಗದ್ದುಗೆಗೆ ಮಹಾ ಅಭಿಷೇಕ, ಗಂಗಾ ಪೂಜೆ, ಪ್ರಸಾದ ವಿತರಣೆ ನೆರವೇರಿದವು. ದೇವಿದಾಸ ಶ್ರೀಮಾಳೆ ಹಾಗೂ ಧನ್ನೂರ(ಎಚ್) ಗ್ರಾಮಸ್ಥರು ಭಕ್ತಿ ದಾಸೋಹಗೈದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲ್‍ಸಿಂಗ್ ಠಾಕೂರ್, ಗುಂಡೇರಾವ್ ಪಾಟೀಲ, ಶಾಂತಕುಮಾರ, ಶ್ರೀಕಾಂತ ಸ್ವಾಮಿ, ಗುರುಲಿಂಗಯ್ಯ ಸ್ವಾಮಿ, ಶರಣಯ್ಯ ಸ್ವಾಮಿ ಮತ್ತಿತರರು ಇದ್ದರು. ಜಾತ್ರೆ ಜನವರಿ 11 ರ ವರೆಗೆ ನಡೆಯಲಿದೆ.