ಬೀದರ್: ಬಿಜೆಪಿಯವರು ಬಡವರ ಶವದ ಮೇಲೆ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಸಲಹೆ ಮಾಡಿದ್ದಾರೆ.
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೂ ಪ್ರಿಯಾಂಕ್ ಖರ್ಗೆ ಅವರಿಗೂ ಸಂಬಂಧವಿಲ್ಲ. ಡೆತ್‍ನೋಟ್‍ನಲ್ಲಿ ಅವರ ಹೆಸರಿಲ್ಲ. ಆದರೂ, ಅವರ ವಿರುದ್ಧ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಅನೇಕ ಕಡೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಸಚಿನ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಈಗಾಗಲೇ ಸಿಐಡಿ ತನಿಖೆಗೆ ಕೊಟ್ಟಿದೆ. ಸಚಿನ್ ಮನೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ. ಆದರೆ, ಬಿಜೆಪಿಯವರು ಗುತ್ತಿಗೆದಾರ ಮನೆಗೆ ಭೇಟಿ ಕೊಟ್ಟು ಮೊಸಳೆ ಕಣ್ಣೀರು ಮಾತ್ರ ಸುರಿಸಿದ್ದಾರೆ. ಕುಟುಂಬದವರ ಜತೆ ಫೊಟೋ ತೆಗೆಸಿಕೊಂಡು ಹೋಗಿದ್ದಾರೆ. ಪಕ್ಷ ಅಥವಾ ವೈಯಕ್ತಿಕವಾಗಿ ನಯಾ ಪೈಸೆ ಸಹಾಯಧನ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಉತ್ತಮ ಕೆಲಸದಿಂದ ಹೆಸರು ಮಾಡಿದ್ದಾರೆ. ಅವರ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಬಿಜೆಪಿಯವರಿಗೆ ಅವರ ಏಳಿಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರೇ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಮನವಿ ಮಾಡಿದ್ದಾರೆ. ಬಿಜೆಪಿಯವರು ಹೊಸ ವರ್ಷದಲ್ಲಾದರೂ ಶವದ ಮೇಲೆ ರಾಜಕೀಯ ಮಾಡುವುದು, ಕೋಮು ದ್ವೇಷ ಹರಡುವುದನ್ನು ಬಿಟ್ಟು, ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಒತ್ತಾಯಿಸಿದ್ದಾರೆ.