ಜಿಲ್ಲೆ

ಹಾಲು ಉತ್ಪಾದನೆಯಲ್ಲಿ ಭಾರತ ಪ್ರಥಮ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಹೇಳಿದರು.

ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರ್ ವತಿಯಿಂದ ತಾಲೂಕಿನ ಕಾಕನಳ ಗ್ರಾಮದಲ್ಲಿ ಆಯೋಜಿಸಿದ್ದ ರೈತ ಮೇಳ ಉದ್ಘಾಟಿಸಿ ಮಾತನಾಡಿ, ಹಾಲಿನಿಂದ ಮನುಷ್ಯನ ದೇಹದ ಬೆಳವಣಿಗೆ ಮತ್ತು ದೈನಿಂದಿನ ಕಾರ್ಯಚಟುವಟಿಕೆಗಳಿಗೆ ಬೇಕಾಗುವ ಎಲ್ಲ ಪೋಷಕಾಂಶಗಳು ಸಿಗುತ್ತವೆ ಎಂದರು.

ಹಾಲು ಉತ್ಪಾದನೆ ಜತೆಗೆ ಇದೀಗ ಸ್ವಚ್ಛ ಹಾಗೂ ಗುಣಮಟ್ಟದ ಉತ್ಪಾದನೆ ಕಡೆಗೆ ಗಮನ ನೀಡಬೇಕಾಗಿದೆ. ಆಗ ಮಾತ್ರ ನಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ದೊರೆಯತ್ತದೆ. ಪ್ರಾಣಿಜನ್ಯ ರೋಗಗಳ ಅರಿವು ಮೂಡಿಸುವುದು ಹಾಗೂ ಸ್ವಚ್ಛ ಜಾನುವಾರು ಉತ್ಪನ್ನಗಳ ಉತ್ಪಾದನೆ ಕುರಿತು ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಸ್.ಬಿ. ಬಾರ್ಬುದೆ ಮಾತನಾಡಿ, ಪಶು ಆಧಾರಿತ ಉತ್ಪನ್ನಗಳಲ್ಲಿ ಗುಣಮಟ್ಟ ಹಾಗೂ ಸ್ವಚ್ಛತೆ ನಮ್ಮ ಮುಂದಿರುವ ಸವಾಲುಗಳಾಗಿವೆ. ಪಶು ಸಂಪತ್ತು ರಕ್ಷಿಸಿಕೊಂಡು ಹೋಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಶುವೈದ್ಯಕೀಯ ಮಹಾವಿದ್ಯಾಲಯ ಡೀನ್ ಡಾ.ಎಂ.ಕೆ. ತಾಂಡಳೆ ಮಾತನಾಡಿ, ಬರುವ ಜನವರಿಯಲ್ಲಿ ಪಶು ವಿಶ್ವವಿದ್ಯಾಲಯದಲ್ಲಿ ಜಾನುವಾರು ಮೇಳ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಬಸವರಾಜ ಭತಮುರ್ಗೆ ಮಾತನಾಡಿ, ಹಾಲು ಎಲ್ಲರೂ ಸೇವಿಸುವ, ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ವ್ಯಕ್ತಿ ಆರೋಗ್ಯದಿಂದ ಇರಲು ಬೇಕಾಗುವ ಎಲ್ಲ ಪೌಷ್ಟಿಂಕಾಶ ಹಾಗೂ ಖನಿಜಾಂಶಗಳು ಇದರಲ್ಲಿವೆ. ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಬೇಕಾಗುವ ನೆರವು ವಿಶ್ವವಿದ್ಯಾಲಯ ಮಾಡಲಿದೆ ಎಂದು ಹೇಳಿದರು.

ಡಾ.ಬಿ.ವಿ. ಶಿವಪ್ರಕಾಶ, ಡಾ.ಬಸವರಾಜ ಅವಟಿ, ಡಾ.ನರಸಪ್ಪ, ಡಾ.ಕಿಶಾನ್ ಬಿರಾದಾರ್, ಡಾ.ಪ್ರಶಾಂತಕುಮಾರ ವಾಘೆ, ಡಾ.ರವೀಂದ್ರ ಡಾಂಬರ್, ಡಾ.ಸವಿತಾ ಕಾಶಪ್ಪನವರ್, ಗಣ್ಯರಾದ ಭಗವಾನ್ ಪಾಟೀಲ್, ಮಾರುತಿರಾವ ವಾಘೆ, ಸುನೀಲ ಬಿರಾದಾರ್, ರಂಗರಾವ ಬಿರಾದಾರ್, ಬಾಬುರಾವ ತಾಂಬರೆ, ಮಧುಮಾಲಾ ಸಾಳುಂಕೆ, ಪ್ರೇಮಲಾ ತುಮಂಪಳೆ, ವೆಂಕುಬಾಯಿ, ಸುರೇಖಾ ಮೇತ್ರೆ ಇತರರಿದ್ದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ಅರುಣ ಖರಾಟೆ ಸ್ವಾಗತಿಸಿದರು. ಡಾ.ಕೊಟ್ರೇಶ್ ಪ್ರಸಾದ ನಿರೂಪಣೆ ಮಾಡಿದರು. ಮೇಳದ ನಿಮಿತ್ತ ಜಾನುವಾರುಗಳ ಪ್ರದರ್ಶನ ಸ್ಪರ್ಧೆ ಹಾಗೂ ಉಚಿತ ಪಶು ಚಿಕಿತ್ಸಾ ಶಿಬಿರ ನಡೆಯಿತು.