ಔರಾದ್: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಅಧಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ರೈತರ ಬೆಳೆ ಹಾನಿಯಾಗಿದ್ದು, ಎಲ್ಲ ರೈತರಿಗೆ ಸಮರ್ಪಕವಾಗಿ ಪರಿಹಾರ ನೀಡಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಆಗ್ರಹಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಗುರುವಾರ ನಡೆದ ಅಧಿವೇಶನದಲ್ಲಿ ಶಾಸಕ ಚವ್ಹಾಣ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರಸಕ್ತ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಸುರಿದ ಅತ್ಯಕ ಮಳೆಯಿಂದಾಗಿ ಬೀದರ್ ಜಿಲ್ಲೆಯಲ್ಲಿ 7,768.70 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹಾಗೆಯೇ 2022-23 ರಲ್ಲಿ 65,187.83 ಹೆಕ್ಟೇರ್, 2023-24ರಲ್ಲಿ 6438.52 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎನ್ ಡಿಆರ್.ಎಫ್, ಎಸ್.ಡಿಆರ್.ಎಫ್ ನಂತೆ ಬೆಳೆಹಾನಿಗೆ ಸಂಬಂಧಿಸಿದ ಪ್ರತಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರಿಗೆ ಸೀಮಿತಗೊಳಿಸಿ, ಶೇ.33 ರಷ್ಟು ಹಾನಿಯಾದ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 8500, ನೀರಾವರಿ ಬೆಳೆಗಳಿಗೆ ಪ್ರತಿ ಹೆ.17000 ಮತ್ತು ಬಹು ವಾರ್ಷಿಕ ಬೆಳೆಗಳಿಗೆ ಪ್ರತಿ ಹೆ.22,500 ಗಳ ಪರಿಹಾರ ನಿಗದಿಪಡಿಸಲಾಗಿದೆ. ಅರ್ಹ ರೈತರಿಗೆ ಡಿಬಿಟಿ ತಂತ್ರಾಂಶದ ಮೂಲಕ ಪರಿಹಾರ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಬೆಳೆ ಹಾನಿಗೆ ಸಂಬಂಧಿಸಿದಂತೆ ಸಮೀಕ್ಷಾ ಕಾರ್ಯ ಸಮರ್ಪಕವಾಗಿ ನಡೆದಿಲ್ಲವೆಂದು ರೈತರಿಂದ ದೂರುಗಳು ಬರುತ್ತಿವೆ. ಅಲ್ಲದೆ ಬಿಡುಗಡೆಯಾದ ಬೆಳೆ ಹಾನಿ ಪರಿಹಾರ ಎಲ್ಲ ರೈತರಿಗೆ ಸಮರ್ಪಕವಾಗಿ ತಲುಪಿಲ್ಲ. ಕೆಲವು ರೈತರು ಪರಿಹಾರ ಸಿಗದೆ ಕಂಗಾಲಾಗಿದ್ದಾರೆ. ಹೀಗಾಗಿ ಸಮೀಕ್ಷಾ ಕಾರ್ಯ ಸರಿಯಾಗಿ ನಡೆಸಿ ಬೆಳೆ ಹಾನಿಯಾದ ಯಾವೊಬ್ಬ ರೈತನೂ ಸರ್ಕಾರದ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದು ಚವ್ಹಾಣ್ ಒತ್ತಾಯಿಸಿದರು.