ಜಿಲ್ಲೆ

ಪ್ರೀತಿ, ವಿಶ್ವಾಸದಿಂದ ವಿಶ್ವಗುರುವಾಗಲು ಸಾಧ್ಯ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಭ್ರಾತೃತ್ವದ ವಾತಾವರಣ ನಿರ್ಮಾಣದಿಂದ ಭಾರತ ನಿಜ ಅರ್ಥದಲ್ಲಿ ವಿಶ್ವಗುರುವಾಗಲು ಸಾಧ್ಯವಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ನುಡಿದರು.

ಸೇಂಟ್ ಜೋಸೆಫ್ ಚರ್ಚ್ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕ್ರಿಸ್ಮಸ್ ಸೌಹಾರ್ದ ಕೂಟದಲ್ಲಿ ಅವರು ಮಾತನಾಡಿದರು. ಪ್ರಸ್ತುತ ದೇಶಕ್ಕೆ ಸೇತುವೆ, ಮೂಲಸೌಕರ್ಯ, ರಫ್ತು ಮೊದಲಾದವುಗಳಿಗಿಂತ ಪ್ರೀತಿ,

ವಿಶ್ವಾಸದ ಹೆಚ್ಚು ಅವಶ್ಯಕತೆ ಇದೆ ಎಂದು ತಿಳಿಸಿದರು.

ಎಲ್ಲ ಧರ್ಮಗಳು ಪ್ರೀತಿ, ಸಹೋದರತೆ, ಶಾಂತಿ ಹಾಗೂ ಸಮಾನತೆಯನ್ನೇ ಬಯಸುತ್ತವೆ. ಹೀಗಾಗಿ ಸಮಾಜದಲ್ಲಿ ಭೇದ ಭಾವವನ್ನು ಶಾಂತಿ, ಪ್ರೀತಿಯಿಂದ ಕೊನೆಗಾಣಿಸಬೇಕಾಗಿದೆ. ಭಾತೃತ್ವ, ಪರಸ್ಪರರನ್ನು ಪ್ರೀತಿಸುವ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದರು.

ಉತ್ತಮ ನಾಗರಿಕರೇ ದೇಶದ ನಿಜವಾದ ಸಂಪತ್ತು. ಕಾರಣ, ಮಕ್ಕಳನ್ನು ಒಳ್ಳೆಯ ನಾಗರಿಕರನ್ನಾಗಿ ರೂಪಿಸಬೇಕಾಗಿದೆ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಬೇಕು. ಕಠಿಣ ಪರಿಶ್ರಮದ ಮೂಲಕ ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕು. ಆದರ್ಶ ನಾಗರಿಕರಾಗಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಕಲಬುರಗಿಯ ಫಾದರ್ ಆನಂದಪ್ರಭು ಮಾತನಾಡಿ, ಕ್ರಿಸ್ಮಸ್ ಕ್ರೈಸ್ತರ ಹಬ್ಬವಷ್ಟೇ ಅಲ್ಲ; ಇಡೀ ಮನುಕುಲದ ಹಬ್ಬವಾಗಿದೆ ಎಂದು ನುಡಿದರು.

ಯೇಸು ಕ್ರಿಸ್ತರ ಶಾಂತಿ, ಸಮಾಧಾನ, ಸಹಬಾಳ್ವೆ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಾಗಿ ಡಾ. ಅಬ್ದುಲ್ ಖದೀರ್ ಅವರಿಗೆ ಶಾಂತಿದೂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗುರುದ್ವಾರದ ವ್ಯವಸ್ಥಾಪಕ ದರ್ಬಾರಾಸಿಂಗ್, ಫಾದರ್ ಕ್ಲೇರಿ ಡಿಸೋಜಾ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್‍ಜಿ, ಬಿಡಿಎ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್, ನಗರಸಭೆ ಮಾಜಿ ಸದಸ್ಯ ಧನರಾಜ ಹಂಗರಗಿ, ಸಿಪಿಐ

ವಿಜಯಕುಮಾರ ಬಾವಗೆ, ಡಾನ್ ಬೊಸ್ಕೋ ಸಮಾಜ ಸೇವಾ ಸಂಸ್ಥೆಯ ಫಾದರ್ ಸ್ಟೀವನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆಯೋಜಕ ಫಾದರ್ ವಿಲ್ಸನ್ ಫರ್ನಾಂಡೀಸ್ ಸ್ವಾಗತಿಸಿದರು. ನಾಗರಾಜ ಕುಲಕರ್ಣಿ, ವೀಣಾ ನಿರೂಪಿಸಿದರು. ಕೆಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ದೊಡ್ಡಿ ವಂದಿಸಿದರು.