ಜಿಲ್ಲೆ

ಶೈಕ್ಷಣಿಕ ಪ್ರವಾಸ ರದ್ದುಪಡಿಸಲು ಒತ್ತಾಯ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲೆಯಲ್ಲಿ ಚಳಿ ಹೆಚ್ಚಾಗಿರುವ ಕಾರಣ ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ಪ್ರವಾಸ ರದ್ದುಪಡಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.

ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.

ತಾಪಮಾನ ಕುಸಿತ ಹಾಗೂ ಶೀತಗಾಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಈಗಾಗಲೇ ಆಡಳಿತ ಸಲಹೆ ನೀಡಿದೆ. ಹೀಗಾಗಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸದ್ಯಕ್ಕೆ ಪ್ರವಾಸಗಳನ್ನು ಮುಂದೂಡಬೇಕು ಎಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಬೇಡಿಕೆ ಮಂಡಿಸಿದರು.

ಚಳಿ ಕಡಿಮೆಯಾದ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಸಲಹೆ ಮಾಡಿದರು.

ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಅಜೀಮ್ ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಕಾರ್ಯದರ್ಶಿ ಜಿತೇಂದ್ರ ರಾಠೋಡ್, ಪ್ರಧಾನ ಸಂಚಾಲಕ ಸುಧಾಕರ್ ರಾಠೋಡ್, ಜಗದೀಶ್ ಬಿರಾದಾರ, ಸಂತೋಷ ಪಾಟೀಲ, ಗುರುನಾಥ ರಾಠೋಡ್ ಇದ್ದರು.