ಜಿಲ್ಲೆ

ನೌಕರರ ಸಂಘದ ಚುನಾವಣೆ ಮುಂದೂಡಿಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಡಿ. 16ರಂದು ನಡೆಯಬೇಕಿದ್ದ ಚುನಾವಣೆ ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ.

ಎರಡು ಪೆನಾಲ್ನ ಜಿದ್ದಾಜಿದ್ದಿಯಿಂದ ಚುನಾವಣೆ ಕುತೂಹಲ ಕೆರಳಿಸಿದೆ. ಒತ್ತಡ, ಭಯದ ವಾತಾವರಣ ಹಿನ್ನೆಲೆಯಲ್ಲಿ ಸಂಘದ ಜಿಲ್ಲಾ ಚುನಾವಣಾಧಿಕಾರಿ ಬಸವರಾಜ ಸ್ವಾಮಿ ಅವರು, ಸಂಘದ ರಾಜ್ಯ ಚುನಾವಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರರಿಗೆ ಪತ್ರ ಬರೆದು, ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ಸಂಘದ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸೋಮಶೇಖರ ಚಿದ್ರಿ ಮತ್ತು ಇತರರು ಶುಕ್ರವಾರ ಸಂಜೆ ಬಸವನಗರದಲ್ಲಿನ ನನ್ನ ಮನೆಗೆ ಬಂದು ಚುನಾವಣೆ ಸಂಬಂಧ ಕೋಟರ್್ನಲ್ಲಿನ ತಡೆಯಾಜ್ಞೆ ತೆರವುಗೊಂಡಿದ್ದು, ಚುನಾವಣೆ ದಿನಾಂಕ ಘೋಷಣೆ ಮಾಡಬೇಕೆಂದು ಗದ್ದಲ ಮಾಡಿ ಒತ್ತಡ ಹಾಕಿದ್ದಾರೆ. ಚುನಾವಣೆ ಘೋಷಣೆ ಮಾಡುವವರೆಗೆ ಮನೆಯಿಂದ ಹೋಗುವಂತಿಲ್ಲ ಎಂದು ಒತ್ತಡಕ್ಕೆ ಮಣಿದು ಚುನಾವಣೆ ಘೋಷಣೆ ಮಾಡಿರುವೆ ಎಂದು ಪತ್ರದಲ್ಲಿ ಸ್ವಾಮಿ ತಿಳಿಸಿದ್ದಾರೆ.

ಚಿದ್ರಿ ತಂಡದವರು ಹೋದ ನಂತರ ರಾತ್ರಿ ಜಿಲ್ಲಾಧ್ಯಕ್ಷ ಅಭ್ಯರ್ಥಿ ರಾಜೇಂದ್ರಕುಮಾರ ಗಂದಗೆ ಮತ್ತು ಇತರರು ಬಂದು, ಚುನಾವಣೆ ಘೋಷಣೆ ಮಾಡಿದ್ದಕ್ಕೆ ಆಕ್ಷೇಪಿಸಿದರು. ಕಾನೂನು ಬಾಹಿರವಾಗಿ ಕ್ರಮಕೈಗೊಂಡಿದ್ದು, ಚುನಾವಣೆ ಘೋಷಣೆ ವಾಪಸ್ ಪಡೆಯಬೇಕೆಂದು ಒತ್ತಡ ಹಾಕಿದರು ಎಂದು ಹೇಳಿದ್ದಾರೆ.

ಘಟನೆ ಕುರಿತು ರಾಜ್ಯ ಚುನಾವಣಾಧಿಕಾರಿ, ಉಸ್ತುವಾರಿ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವೆ. ಸಂಘದ ರಾಜ್ಯ ಘಟಕದ ಮಾರ್ಗದರ್ಶನ, ನಿರ್ದೇಶನದಂತೆ ನಡೆದುಕೊಳ್ಳಬೇಕು. ಚುನಾವಣೆ ದಿನಾಂಕ ಘೋಷಣೆ ಜಿಲ್ಲಾ ಚುನಾವಣಾಧಿಕಾರಿ ಮಾಡುವುದು ತಪ್ಪು ಎಂದು ಹೇಳಿದ್ದಕ್ಕೆ ಚುನಾವಣೆಯನ್ನು ಮುಂದೂಡಲಾಗಿದೆ. ಭಯದ ವಾತಾವರಣ ಇದ್ದು ಪೊಲೀಸ್ ಭದ್ರತೆ ಕೊಡಬೇಕು. ಏನಾದರೂ ಅಹಿತಕರ ಘಟನೆ ನಡೆದರೆ ಈ ಎರಡು ತಂಡಗಳು ಹೊಣೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.